


ಅಬ್ದುಲ್ ರಹಿಮಾನ್ ಮತ್ತು ವಯನಾಡ್ ಅಶ್ರಫ್ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಭಟನೆಗೆ ಕರೆ ಕೊಟ್ಟು ಅಕ್ರಮ ಕೂಟ ಸೇರಿ ಅಪರಾಧ ಎಸಗಲು ವಾಟ್ಸಾಪ್ ಸಂದೇಶದ ಮೂಲಕ ದುಷ್ಪ್ರೇರಣೆ ನೀಡಿದ ವಿರುದ್ಧ ಪ್ರಕರಣ ದಾಖಲಾಗಿದೆ.
ಬಂಟ್ವಾಳದ ಬಿ.ಮೂಡಾ ಗ್ರಾಮದ ನಿವಾಸಿಯಾದ ಅಶ್ರಫ್ ತಲಪಾಡಿ (41) ಹಾಗೂ ಇನ್ನಿಬ್ಬರು ದಿನಾಂಕ: 01.07.2025 ರಂದು ಸಂಜೆ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಆಗಮಿಸಿ, ಅಬ್ದುಲ್ ರಹಿಮಾನ್ ಹತ್ಯೆ ಮತ್ತು ಅಶ್ರಫ್ ವಯನಾಡ್ ಎಂಬಾತನ ಗುಂಪು ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ, ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ, ದಿನಾಂಕ:04.07.2025ರಂದು ಅಪರಾಹ್ನ, ಕೈಕಂಬ ಜಂಕ್ಷನ್ ನಲ್ಲಿ ನಡೆಸಲು ಉದ್ದೇಶಿಸಿರುವ ಪ್ರತಿಭಟನಾ ಸಭೆಗೆ ಧ್ವನಿವರ್ಧಕ ಬಳಸಲು ಅನುಮತಿ ಮತ್ತು ಸೂಕ್ತ ಬಂದೋಬಸ್ತ್ ಒದಗಿಸುವಂತೆ ಮನವಿ ಪತ್ರ ನೀಡಿರುತ್ತಾರೆ.
ಈ ಮನವಿಯನ್ನು ಸ್ವೀಕರಿಸಿಕೊಂಡ ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರು, ಮನವಿದಾರರಿಗೆ ಪ್ರಕರಣಗಳಲ್ಲಿ ಸರಕಾರ ಪರಿಹಾರ ಮೊತ್ತವನ್ನು ನೀಡದಿರುವ ಬಗ್ಗೆ ಮೃತರ ಕುಟುಂಬಸ್ಥರು ಅಥವಾ ಯಾರಾದರೂ ಮನವಿ ನೀಡಿರುತ್ತಾರೆಯೇ ಎಂದು ಹೇಳಿದಾಗ ಯಾರು ನೀಡಿರುವುದಿಲ್ಲವೆಂಬುದಾಗಿ ಮತ್ತು ಷಡ್ಯಂತ್ರ ರೂಪಿಸಿದ ಆರೋಪಿತರ ಬಗ್ಗೆ ಮಾಹಿತಿ ಅಥವಾ ಸಾಕ್ಷಿಗಳು ಇದೆಯೇ ಎಂದು ಪ್ರಶ್ನಿಸಿದಾಗ ನಿರ್ದಿಷ್ಟ ಖಚಿತ ಮಾಹಿತಿ ಇರುವುದಿಲ್ಲ ಎಂಬುದಾಗಿ ಮನವಿದಾರರು ನುಡಿದಿರುತ್ತಾರೆ. ಈ ಘಟನೆಗಳಿಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿ ತನಿಖೆಯಲ್ಲಿರುವುದರಿಂದ ಆರೋಪಿತರು ಮತ್ತು ಸಾಕ್ಷ್ಯಗಳ ಬಗ್ಗೆ ಮಾಹಿತಿ ಇದ್ದಲ್ಲಿ ಸಂಬಂಧಪಟ್ಟ ತನಿಖಾಧಿಕಾರಿಗೆ ಹಾಗೂ ಇತರೆ ಬೇಡಿಕೆಗಳಿದ್ದಲ್ಲಿ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಕಾನೂನಾತ್ಮಕವಾಗಿ ಸೂಕ್ತ ರೀತಿಯಲ್ಲಿ ಸಂಪರ್ಕಿಸುವಂತೆ ಸೂಚಿಸಿ, ದ.ಕ. ಜಿಲ್ಲೆಯಲ್ಲಿ ಹಾಗೂ ಬಂಟ್ವಾಳ ತಾಲೂಕಿನಲ್ಲಿ ಕಳೆದ ಸುಮಾರು ವರ್ಷಗಳಿಂದ ನಡೆದಿರುವ ಕೋಮು ಸಂಬಂಧಿತ ಹತ್ಯೆ ಮತ್ತು ಸಂಘರ್ಷಗಳನ್ನು ಅವಲೋಕಿಸಿಕೊಂಡು ಬಂಟ್ವಾಳದಲ್ಲಿ ಕಾನೂನು ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಸೂಕ್ತ ಕಾನೂನು ತಿಳುವಳಿಕೆ ನೀಡಿ ಅನುಮತಿ ನಿರಾಕರಿಸಿ ಹಿಂಬರಹವನ್ನು ನೀಡಲಾಗಿರುತ್ತದೆ.
ಅದಾಗ್ಯೂ “ಬ್ರೇಕಿಂಗ್ ನ್ಯೂಸ್ ಮೈಕಾಲ” ಎಂಬ ವಾಟ್ಸಾಪ್ ಗ್ರೂಪ್ ನಲ್ಲಿ “ನ್ಯಾಯ ಮರೀಚಿಕೆ, ಹುಸಿಯಾದ ಭರವಸೆ” ಅಬ್ದುಲ್ ರಹಿಮಾನ್ ಮತ್ತು ವಯನಾಡ್ ಅಶ್ರಫ್ ಕೊಲೆ ಕೃತ್ಯದ ಪ್ರಮುಖ ಆರೋಪಿಗಳ ಬಂಧನದ ವಿಳಂಬ ಮತ್ತು ಪರಿಹಾರ ಘೋಷಿಸದ ಸರ್ಕಾರದ ನಡೆಯನ್ನು ವಿರೋಧಿಸಿ ಪ್ರತಿಭಟನಾ ಸಭೆಯನ್ನು ದಿನಾಂಕ: 04.07.2025 ಶುಕ್ರವಾರದಂದು ಸಂಜೆ: 4.00 ಗಂಟೆಗೆ ಕೈಕಂಬ ಜಂಕ್ಷನ್ (ಬಿ.ಸಿ ರೋಡು)ನಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲೆ ಎಂಬುದಾಗಿ ಪೋಸ್ಟ್ ಹರಿದಾಡುತ್ತಿರುವುದು ಕಂಡುಬಂದಿದ್ದು, ಮನವಿದಾರರಿಗೆ ಸೂಕ್ತ ಕಾನೂನು ತಿಳುವಳಿಕೆ ನೀಡಿ ಹಿಂಬರಹವನ್ನು ನೀಡಲಾಗಿದ್ದರೂ ಕೂಡಾ ಅಶ್ರಫ್ ತಲಪಾಡಿ, ಜಿಲ್ಲಾ ಕಾರ್ಯದರ್ಶಿ, ಎಸ್.ಡಿ.ಪಿ.ಐ, ಹಾಗೂ ಇತರರು ದಿನಾಂಕ: 04.07.2025ರಂದು ಶುಕ್ರವಾರ ಸಂಜೆ 4.00 ಗಂಟೆಗೆ ಕೈಕಂಬ ಜಂಕ್ಷನ್ ಬಿ.ಸಿ ರೋಡಿನಲ್ಲಿ ಪ್ರತಿಭಟನಾ ಸಭೆ ಎಂಬುದಾಗಿ ಬರಹ ಇರುವ ಪೋಸ್ಟರ್ ನ್ನು ಸಾರ್ವಜನಿಕರಿಗೆ ವಾಟ್ಸಾಪ್ ಮೂಲಕ ಪ್ರಸಾರ ಮಾಡಿ, ದಿನಾಂಕ: 04.07.2025ರ ಸಂಜೆ ಕೈಕಂಬ ಜಂಕ್ಷನ್ ಬಿ.ಸಿ ರೋಡು ಎಂಬಲ್ಲಿ ಅಕ್ರಮ ಕೂಟ ಸೇರಿ ಅಪರಾಧ ಎಸಗಲು ವಾಟ್ಸಾಪ್ ಸಂದೇಶದ ಮೂಲಕ ದುಷ್ಪ್ರೇರಣೆ ನೀಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 57 ಹಾಗೂ ಕಲಂ: 189(2) BNS -2023 ರಂತೆ ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭವಾಗಿದೆ ಎಂದು ಠಾಣೆ ಮೂಲಗಳು ತಿಳಿಸಿದೆ.