


ವಿಟ್ಲ: ಅಸ್-ಸದಕ ಟ್ರಸ್ಟ್ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವಿಟ್ಲ ಕಛೇರಿಗೆ ಗರ್ಭಿಣಿ ಮತ್ತು ಬಾಣಂತಿಯರಿಗೆ ತಾತ್ಕಾಲಿಕ ವಿಶ್ರಾಂತಿ ಕೊಠಡಿ ನಿರ್ಮಿಸಿ ಕೊಡುಗೆ ನೀಡಿದೆ.

ಕಛೇರಿಯ ಕೆಲಸ-ಕಾರ್ಯಗಳಿಗೆ ಬರುವ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ತಾತ್ಕಾಲಿಕ ವಿಶ್ರಾಂತಿ ಪಡೆಯಲು ಹಾಗೂ ಪುಟಾಣಿಗಳಿಗೆ ಹಾಲುಣಿಸಲು ಸೂಕ್ತ ಸ್ಥಳಾವಕಾಶ ಇಲ್ಲವಾಗಿತ್ತು. ಈ ಬಗ್ಗೆ ಯೋಚಿಸಿದ ಇಲ್ಲಿನ ಅಧಿಕಾರಿಗಳು ಜಿಲ್ಲೆಯಾದ್ಯಂತ ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ಅಸ್-ಸದಕ ಟ್ರಸ್ಟ್ ಗೆ ಸಾಮಾಜಿಕ ಕಾರ್ಯಕರ್ತ ಹಸೈನಾರ್ ತಾಳಿತ್ತನೂಜಿ ಮೂಲಕ ಬೇಡಿಕೆಯಿಟ್ಟಿದ್ದರು. ಸಮಸ್ಯೆಯ ಗಂಭೀರತೆ ಅರಿತುಕೊಂಡ ಹಸೈನಾರ್ ತಾಳಿತ್ತನೂಜಿ ಅವರು ತಕ್ಷಣವೇ ಟ್ರಸ್ಟ್ ಮುಖ್ಯಸ್ಥರಿಗೆ ಪರಿಸ್ಥಿತಿಯ ಮನವರಿಕೆ ಮಾಡಿ ವಿಶ್ರಾಂತಿ ಕೊಠಡಿ ಕೊಡುಗೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಟ್ರಸ್ಟ್ ಹಾಗೂ ಹಸೈನಾರ್ ತಾಳಿತ್ತನೂಜಿ ಅವರ ಸಾಮಾಜಿಕ ಕಾರ್ಯಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಮುಮ್ತಾಜ್ ಬೇಗಂ, ಶ್ರೀಮತಿ ರೇಣುಕಾ ಮತ್ತು ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಇಂದು ನೂತನ ವಿಶ್ರಾಂತಿ ಕೊಠಡಿಯನ್ನು ಕಛೇರಿಯ ಅಧಿಕಾರಿ ಮುಮ್ತಾಜ್ ಬೇಗಂ ಉದ್ಧಾಟಿಸಿದರು. ಟ್ರಸ್ಟ್ ಪದಾಧಿಕಾರಿಗಳು, ಕೊಳ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಅಸ್ಮಾ ಹಸೈನಾರ್, ಚಂದ್ರಶೇಖರ ತಾಳಿತ್ತನೂಜಿ, ಸಂದೇಶ್ ಶೆಟ್ಟಿ ಬಿಕ್ನಾಜೆ ಮತ್ತಿತರರು ಉಪಸ್ಥಿತರಿದ್ದರು.









