



ಮಂಗಳೂರು: ಡಿಜಿಟಲ್ ಅರೆಸ್ಟ್ ಪ್ರಕರಣವೊಂದರಲ್ಲಿ ಪೊಲೀಸರ ತ್ವರಿತ ಕಾರ್ಯಾಚರಣೆಯ ಮೂಲಕ ಸಂತ್ರಸ್ತೆಯು ಕಳೆದುಕೊಂಡಿದ್ದ ಹಣವನ್ನು ಸಂತ್ರಸ್ತೆಗೆ ಹಸ್ತಾಂತರಿಸಿದ್ದಾರೆ.
ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಡಿಸಿಪಿಗಳಾದ ಮಿಥುನ್ ಹಾಗೂ ರವಿಶಂಕರ್ ಅವರ ಸಮ್ಮುಖದಲ್ಲಿ ಸಂತ್ರಸ್ತೆಗೆ ಆಕೆ ಕಳೆದುಕೊಂಡಿದ್ದ 17 ಲಕ್ಷ ರೂ.ಗಳ ಹಣದ ಸಾಂಕೇತಿಕ ವರ್ಗಾವಣೆ ನಡೆಯಿತು.
ಅ. 23ರಂದು ಬಿಜೈ ನಿವಾಸಿ 79ರ ಹರೆಯದ ಮಹಿಳೆಗೆ ಪೊಲೀಸ್ ಸಮಸ್ತದಲ್ಲಿದ್ದ ವ್ಯಕ್ತಿ ವಾಟ್ಸಾಪ್ ಕರೆ ಮಾಡಿ ಮಹಿಳೆಯ ಮೇಲೆ ಅರೆಸ್ಟ್ ವಾರೆಂಟ್ ಜಾರಿಯಾಗಿದೆ ಎಂದು ಬಂಧನದ ಬೆದರಿಕೆಯೊಡ್ಡಿದ್ದಾನೆ.
ಬಂಧನದಿಂದ ಪಾರಾಗಲು ಸಂತ್ರಸ್ತೆ ಹಣವನ್ನು ಠೇವಣಿ ಮಾಡುವಂತೆ ಹಾಗೂ ಪರಿಶೀಲನೆ ಬಳಿಕ ಹಣವನ್ನು ವರ್ಗಾಯಿಸುವುದಾಗಿ ತಿಳಿಸಿದ್ದಲ್ಲದೆ, ಈ ವಿಷಯ ಯಾರಿಗೂ ತಿಳಿಸದಂತೆ ಭಯ ಹುಟ್ಟಿಸಿ ಸುಮಾರು 5 ಗಂಟೆಗಳ ಕಾಲ ಡಿಜಿಟಲ್ ಅರೆಸ್ಟ್‌ನಲ್ಲಿ ಮಹಿಳೆಯನ್ನು ಇರಿಸಲಾಗುತ್ತದೆ. ವಾಟ್ಸಾಪ್ ಕರೆಯಲ್ಲಿ ಡಿಜಿಟಲ್ ಅರೆಸ್ಟ್‌ನಲ್ಲಿದ್ದ ಸಮಯದಲ್ಲೇ ಮಹಿಳೆ ಉಳಿತಾಯ ಮಾಡಿದ್ದ 17 ಲಕ್ಷ ರೂ.ಗಳನ್ನು ತನ್ನ ಬ್ಯಾಂಕ್ ಶಾಖೆಗೆ ತೆರಳಿ ಆರೋಪಿಯ ಖಾತೆಗೆ ಸಂಜೆ 3 ಗಂಟೆಯ ವೇಳೆಗೆ ವರ್ಗಾಯಿಸುತ್ತಾರೆ.
ಅದೇ ದಿನ ಸಂಜೆ ಸುಮಾರು 6 ಗಂಟೆಯ ವೇಳೆಗೆ ತಮ್ಮಫ್ಲಾಟ್‌ನ ಮಹಿಳೆ ಜತೆ ವಿಚಾರ ತಿಳಿಸಿದಾಗ, ಆಕೆ ಸಂತ್ರಸ್ತೆ ಮಹಿಳೆಯ ಜತೆಗೆ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ತೆರಳಿ ದೂರು ನೀಡುತ್ತಾರೆ. ತಕ್ಷಣ ಠಾಣಾ ಠಾಣಾಧಿಕಾರಿ 1930 ಸಹಾಯವಾಣಿ ಮೂಲಕ ಬ್ಯಾಂಕ್ ಖಾತೆಯಲ್ಲಿದ್ದ 17 ಲಕ್ಷ ರೂ.ಗಳನ್ನು ಬ್ಲಾಕ್ ಮಾಡಿಸಿ ಬ್ಯಾಂಕ್ ಮ್ಯಾನೇಜರ್‌ಗೆ ಕರೆ ಮಾಡಿ ಹಣ ಇರುವ ಬಗ್ಗೆ ದೃಢಪಡಿಸುತ್ತಾರೆ. ಅ. 24ರಂದು ಹಣ ಬಿಡುಗಡೆಗೆ ಮಾಹಿತಿಯೊಂದಿಗೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದ್ದು, ಬಳಿಕ ಎರಡು ದಿನ ಸಾರ್ವತ್ರಿಕ ರಜೆ ಇದ್ದ ಕಾರಣ ಅ. 27ರಂದು ನ್ಯಾಯಾಲಯ ಹಣ ಬಿಡುಗಡೆಗೆ ಆದೇಶ ನೀಡಿದೆ. ಆ ಆದೇಶದಂತೆ ಸಂತ್ರಸ್ತೆಯ ಖಾತೆಗೆ ಹಣ ವರ್ಗಾವಣೆ ಮಾಡಿಸಲಾಗಿದೆ.
ಈ ಪ್ರಕರಣದಲ್ಲಿ ತ್ವರಿತ ಗತಿಯಲ್ಲಿ ಸಂತ್ರಸ್ತೆ ದೂರು ನೀಡಿದ ಕಾರಣ ಕ್ಷಿಪ್ರ ಗತಿಯ ಕಾರ್ಯಾಚರಣೆಯ ಮೂಲಕ ಪೊಲೀಸರು ಸಂತ್ರಸ್ತೆಯ ಬ್ಯಾಂಕ್ ಖಾತೆಯಿಂದ ಸೈಬರ್ ಖದೀಮರ ಖಾತೆಗೆ ವರ್ಗಾವಣೆಯಾಗುತ್ತಿದ್ದ ಹಣವನ್ನು ತಡೆಯಲು ಸಾಧ್ಯವಾಯಿತು. ಈ ಮೂಲಕ ಪೂರ್ಣ ಹಣ ವಶಪಡಿಸಿಕೊಳ್ಳಲು ಸಾಧ್ಯವಾಗಿದೆ.








