





ಹಾಸನ: ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಅಪ್ರಾಪ್ತ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿರುವುದು ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿ ಓದುತ್ತಿದ್ದ ಖಾಸಗಿ ಶಾಲೆಯ ಬಸ್ ಚಾಲಕನೇ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿದ್ದಾನೆ.

14 ವರ್ಷದ ಬಾಲಕಿಯನ್ನು ಪುಸಲಾಯಿಸಿ, ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದು, ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿ ರಂಜಿತ್ ಎಂಬಾತ ವಿವಾಹಿತನಾಗಿದ್ದು, ಇಬ್ಬರು ಮಕ್ಕಳ ತಂದೆಯೆಂದು ತಿಳಿದುಬಂದಿದೆ.
ಮೂರು ದಿನಗಳ ಹಿಂದೆ ಶಾಲೆಯ ಕ್ರೀಡಾಕೂಟದ ವೇಳೆ ಬಾಲಕಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ಪರೀಕ್ಷೆಯಲ್ಲಿ ಗರ್ಭಿಣಿಯಾಗಿರುವುದು ದೃಢಪಟ್ಟಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ಪ್ರಸ್ತುತ ತಾಯಿ ಮತ್ತು ನವಜಾತ ಶಿಶುವಿನ ಆರೋಗ್ಯ ಸ್ಥಿರವಾಗಿದ್ದು, ಕೆಲ ದಿನಗಳ ಆರೈಕೆ ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಾಂತ್ವನ ಕೇಂದ್ರಕ್ಕೆ ಒಪ್ಪಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದು, ಆತನ ವಿರುದ್ಧ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.








