


ಮಂಗಳೂರು: ಪೂಜೆಗಾಗಿ ಮಾತ್ರ ತೆರೆಯಲಾಗುತ್ತಿದ್ದ ಖಾಲಿ ಮನೆಯನ್ನು ಟಾರ್ಗೆಟ್ ಮಾಡಿಕೊಂಡು ದೈವ ಮೂರ್ತಿಗಳು ಹಾಗೂ ಪೂಜಾ ಸಾಮಗ್ರಿಗಳನ್ನು ಕಳ್ಳತನ ಮಾಡಿದ ಪ್ರಕರಣವನ್ನು ಸುರತ್ಕಲ್ ಪೊಲೀಸರು ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಕುಳಾಯಿ ಗ್ರಾಮದ ಯಶೋದ ಕ್ಲಿನಿಕ್ ಹತ್ತಿರ ನಿವಾಸಿ ಶ್ರೀಮತಿ ಅಮಿತಾ (43) ಅವರು ನೀಡಿದ ದೂರಿನಂತೆ, ತಮ್ಮ ತಾಯಿ ಮನೆಯಲ್ಲಿ ದೈವ ಮೂರ್ತಿಗಳು ಹಾಗೂ ಪೂಜಾ ಪರಿಕರಗಳನ್ನು ಇರಿಸಲಾಗಿದ್ದು, ಯಾರೂ ವಾಸವಿರದೇ ಕೇವಲ ಪೂಜೆಗಾಗಿ ತೆರೆಯಲಾಗುತ್ತಿತ್ತು. ಈ ಮಧ್ಯೆ 26-12-2025ರಂದು ರಾತ್ರಿ ವೇಳೆ ಅಪರಿಚಿತರು ಮನೆಯ ಮೇಲ್ಚಾವಣಿಯ ಹಂಚು ತೆಗೆದು ಒಳನುಗ್ಗಿ ಸುಮಾರು ರೂ. 1 ಲಕ್ಷ ಮೌಲ್ಯದ ಪಸಪ್ಪ ದೈವದ ತಾಮ್ರ ಮೂರ್ತಿ, ಮಂತ್ರದೇವತೆಯ ಬೆಳ್ಳಿ ಮೂರ್ತಿ, ಕಲ್ಲುರ್ಟಿ ಪಂಜುರ್ಲಿ ದೈವದ ತಾಮ್ರ ಮೂರ್ತಿ, ಬೆಳ್ಳಿಯ ಕಡ್ಸಲೆ (ಖಡ್ಗ), ತಾಮ್ರದ ಘಂಟೆಗಳು, ಚೆಂಬುಗಳು ಹಾಗೂ ಎಲ್‌ಇಡಿ ಟಿ.ವಿ ಕಳವು ಮಾಡಿದ್ದರು.
ಈ ಸಂಬಂಧ ಸುರತ್ಕಲ್ ಠಾಣೆಯಲ್ಲಿ ಅ.ಕ್ರ. 170/2025ರಂತೆ ಬಿ.ಎನ್.ಎಸ್ ಕಲಂ 331(4), 305(ಎ) ಅಡಿ ಪ್ರಕರಣ ದಾಖಲಾಗಿತ್ತು. ಸ್ಥಳದ ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ತನಿಖೆಯ ಆಧಾರದ ಮೇಲೆ ಪೊಲೀಸರು ವಾಜೀದ್ ಜೆ @ ವಾಜಿ (27) ಎಂಬಾತನನ್ನು ಬಂಧಿಸಿದರು.
ವಿಚಾರಣೆ ವೇಳೆ ಆತನೇ ಕಳ್ಳತನ ಎಸಗಿರುವುದಾಗಿ ಒಪ್ಪಿಕೊಂಡು, ಕಳ್ಳತನ ಮಾಡಿದ ಹಿತ್ತಾಳೆ ಮತ್ತು ತಾಮ್ರದ ಸಾಮಗ್ರಿಗಳನ್ನು ಜೋಕಟ್ಟೆಯ ಸಯ್ಯದ್ ಆಲಿ ಎಂಬಾತನಿಗೆ ಮಾರಾಟ ಮಾಡಿರುವುದಾಗಿ ಹೇಳಿದ್ದಾನೆ. ಅದರಂತೆ ಪೊಲೀಸರು ಸಯ್ಯದ್ ಆಲಿ (40) ಯನ್ನೂ ಬಂಧಿಸಿದರು.
ಬಂಧಿತರಿಂದ ಒಟ್ಟು ಸುಮಾರು ರೂ. 1,95,000 ಮೌಲ್ಯದ ಬೆಳ್ಳಿ ಮೂರ್ತಿಗಳು, ಕಡ್ಸಲೆ, ಪೂಜಾ ಸಾಮಗ್ರಿಗಳು, ಟಿ.ವಿ ಮತ್ತು ಸೆಟ್‌ಟಾಪ್ ಬಾಕ್ಸ್, 2 ಮೊಬೈಲ್ ಫೋನ್‌ಗಳು ಹಾಗೂ ಕಾವೂರು ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ರೂ. 30,000 ಮೌಲ್ಯದ ಸ್ಕೂಟರ್ ಅನ್ನು ಮಹಜರು ಮುಖೇನ ವಶಪಡಿಸಿಕೊಳ್ಳಲಾಗಿದೆ.
ಮುಖ್ಯ ಆರೋಪಿ ವಾಜೀದ್ ಮೇಲೆ ಸುರತ್ಕಲ್ ಠಾಣೆಯಲ್ಲಿ ‘ಬಿ’ ರೌಡಿ ಶೀಟ್ ಹಾಗೂ ಎಂಓಬಿ ತೆರೆಯಲಾಗಿದ್ದು, ಮಂಗಳೂರು ನಗರ, ಉಡುಪಿ, ಉತ್ತರ ಕನ್ನಡ ಹಾಗೂ ಹಾಸನ ಜಿಲ್ಲೆಗಳಲ್ಲಿ ಕೊಲೆ ಯತ್ನ, ದರೋಡೆ, ಮನೆಕಳ್ಳತನ, ವಾಹನ ಕಳ್ಳತನ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆತನ ವಿರುದ್ಧ ದಸ್ತಗಿರಿ ವಾರಂಟ್ ಕೂಡ ಹೊರಡಿಸಲಾಗಿತ್ತು.
ಇಬ್ಬರು ಆರೋಪಿಗಳನ್ನು 28-01-2026ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣದ ಹೆಚ್ಚಿನ ತನಿಖೆ ಮುಂದುವರಿದಿದೆ.








