ಮಂಗಳೂರು: ಧರ್ಮಸ್ಥಳ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ, ಕೊಲೆ ಹಾಗೂ ಅಸಹಜ ಸಾವು ಪ್ರಕರಣಗಳಿಗೆ ರಾಜಕೀಯ ಮುಕ್ತ ಎಸ್ಐಟಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಮಾರ್ಚ್ 5ರಂದು ‘ಬೆಂಗಳೂರು ಚಲೋ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜನವಾದಿ ಮಹಿಳಾ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ತಿಳಿಸಿದ್ದಾರೆ. ಮಂಗಳೂರಿನಲ್ಲಿ ನಡೆದ ಸಂಘಟನೆಯ ಪ್ರಮುಖ ಕಾರ್ಯಕರ್ತೆಯರ ಸಮಾವೇಶದಲ್ಲಿ ಅವರು ಈ ಮಾಹಿತಿ ನೀಡಿದರು.
ಕೂಲಿಕಾರರ ವಿರೋಧಿ ‘ವಿ.ಬಿ. ಗ್ರಾಮ್ ಜಿ’ ಮಸೂದೆ ಹಿಂಪಡೆಯಬೇಕು, ಮನರೇಗಾ ಉಳಿಸಬೇಕು, ಮರ್ಯಾದೆಗೇಡು ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಬೇಕು, ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಿಕ ಪಿಂಚಣಿಯನ್ನು ರೂ.5000ಕ್ಕೆ ಹೆಚ್ಚಿಸಬೇಕು, ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ದೌರ್ಜನ್ಯ ಮುಕ್ತ ಬದುಕು ಖಾತ್ರಿ ಮಾಡಬೇಕು ಎಂಬ ಹಲವು ಬೇಡಿಕೆಗಳನ್ನು ಮುಂದಿಟ್ಟು ಈ ಹೋರಾಟ ನಡೆಯಲಿದೆ ಎಂದು ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳಿಂದ ಮಹಿಳೆಯರ ಸಂಕಷ್ಟಗಳು ತೀವ್ರಗೊಂಡಿವೆ. ಆರ್ಥಿಕ ಸಬಲೀಕರಣ ಮತ್ತು ಸುರಕ್ಷಿತ ಬದುಕು ಖಾತ್ರಿಗೊಳಿಸದೆ ಸಮಗ್ರ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಮರ್ಯಾದೆಗೇಡು ಹತ್ಯೆಗಳು ಹಾಗೂ ಯುವಜನರ ಆಯ್ಕೆಯ ಹಕ್ಕಿನ ಮೇಲೆ ನಡೆಯುತ್ತಿರುವ ದಾಳಿಗಳು ಜಾತಿ ವ್ಯವಸ್ಥೆಯ ಪ್ರತಿಫಲನವಾಗಿವೆ. ಈ ಹಿನ್ನೆಲೆಯಲ್ಲಿ ಮುಂಬರುವ ಅಧಿವೇಶನದಲ್ಲಿಯೇ ಮರ್ಯಾದೆಗೇಡು ಹತ್ಯೆ ತಡೆಗಟ್ಟುವ ವಿಶೇಷ ಮಸೂದೆ ಮಂಡಿಸಿ ಅಂಗೀಕರಿಸಬೇಕು ಎಂದು ಒತ್ತಾಯಿಸಲಾಗಿದೆ.
ಧರ್ಮಸ್ಥಳದಲ್ಲಿ ನಡೆದಿರುವ ಸೌಜನ್ಯ, ಪದ್ಮಲತಾ, ವೇದವಲ್ಲಿ, ಮಾವುತ ನಾರಾಯಣ, ಯಮುನಾ ಸೇರಿದಂತೆ ಅನೇಕ ಪ್ರಕರಣಗಳ ಬಗ್ಗೆ ಸಮಗ್ರ ಎಸ್ಐಟಿ ತನಿಖೆ ನಡೆಸಬೇಕು. ಭೂಕಬಳಿಕೆ, ಭೂ ಅಕ್ರಮಗಳು ಹಾಗೂ ಮೈಕ್ರೋಫೈನಾನ್ಸ್ ಸಂಸ್ಥೆಗಳ ದೌರ್ಜನ್ಯಗಳನ್ನೂ ಒಳಗೊಂಡಂತೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಆಗ್ರಹಿಸಲಾಗಿದೆ.
ಮನರೇಗಾ ಕಾಯ್ದೆಯ ಸ್ಥಾನದಲ್ಲಿ ‘ವಿ.ಬಿ. ಗ್ರಾಮ್ ಜಿ’ ಯೋಜನೆಯನ್ನು ಜಾರಿಗೆ ತರುವ ಮೂಲಕ ಕೋಟ್ಯಾಂತರ ಜನರ ಜೀವನಾಧಾರ ಹಾನಿಯಾಗಲಿದೆ ಎಂದು ಸಂಘಟನೆ ಆರೋಪಿಸಿದೆ. ಕೇಂದ್ರದ ಹೊಸ ಯೋಜನೆಯ ಪ್ರಕಾರ ಕೇಂದ್ರದ ಪಾಲು 90ರಿಂದ 60 ಶೇಕಡಕ್ಕೆ ಇಳಿಸಿ, ಉಳಿದ 40 ಶೇಕಡವನ್ನು ರಾಜ್ಯ ಸರ್ಕಾರ ಭರಿಸಬೇಕೆಂದು ಬಿಲ್ನಲ್ಲಿ ಉಲ್ಲೇಖಿಸಲಾಗಿದೆ. ಗ್ರಾಮ ಸಭೆಗಳ ಮೂಲಕ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಕೆಲಸ ಗುರುತಿಸುವ ವ್ಯವಸ್ಥೆಯನ್ನು ಕಡಿಮೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಹೇಳಿದರು.
ಈ ವರ್ಷದ ಕೇಂದ್ರ ಬಜೆಟ್ನಲ್ಲಿ ‘ವಿ.ಬಿ. ಗ್ರಾಮ್ ಜಿ’ ಯೋಜನೆಗೆ ₹95,692 ಕೋಟಿ ಮಾತ್ರ ಮೀಸಲಿಟ್ಟಿರುವುದು ಆತಂಕಕಾರಿ. ಮನರೇಗಾ ಯೋಜನೆಯಡಿ ಸರಾಸರಿ 50 ದಿನಗಳಷ್ಟೇ ಉದ್ಯೋಗ ಸಿಗುತ್ತಿದೆ. 125 ದಿನಗಳ ಕೆಲಸ ನೀಡುವ ಭರವಸೆ ನೈಜವಾಗಿಲ್ಲ. ನಿರುದ್ಯೋಗ ಭತ್ಯೆ ಮತ್ತು ತಡ ಕೂಲಿಗೆ ಪರಿಹಾರವನ್ನು ರಾಜ್ಯ ಸರ್ಕಾರವೇ ಭರಿಸಬೇಕೆಂದು ಹೇಳಿರುವುದು ರಾಜ್ಯಗಳನ್ನು ದುರ್ಬಲಗೊಳಿಸುವ ಕ್ರಮ ಎಂದು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಮೈಕ್ರೋಫೈನಾನ್ಸ್ ಸಾಲದ ಕಿರುಕುಳದಿಂದ ಮಹಿಳೆಯರು ಆತ್ಮಹತ್ಯೆಗೆ ದೂಡಲ್ಪಡುತ್ತಿದ್ದಾರೆ. ಆರಂಭದಲ್ಲಿ ಕಡಿಮೆ ಬಡ್ಡಿ ಹೇಳಿ ಸಾಲ ನೀಡಿ, ನಂತರ 25ರಿಂದ 30 ಶೇಕಡವರೆಗೆ ಚಕ್ರಬಡ್ಡಿ ವಸೂಲಿ ಮಾಡಲಾಗುತ್ತಿದೆ. ರಿಸರ್ವ್ ಬ್ಯಾಂಕ್ ನಿಯಮಗಳನ್ನು ಉಲ್ಲಂಘಿಸಿ ಬಡವರನ್ನು ಶೋಷಿಸುವ ಸಂಸ್ಥೆಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಲಾಗಿದೆ.
ಕರ್ನಾಟಕ ಸರ್ಕಾರ ಮೈಕ್ರೋಫೈನಾನ್ಸ್ ನಿಯಂತ್ರಣಕ್ಕೆ ಸುಗ್ರೀವಾಜ್ಞೆ ಜಾರಿಗೊಳಿಸಿರುವುದನ್ನು ಸ್ವಾಗತಿಸಿದರೂ, ಸಮರ್ಪಕ ಜಾರಿ ಅಗತ್ಯವಿದೆ ಎಂದು ಸಂಘಟನೆ ತಿಳಿಸಿದೆ.
ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಬಿಪಿಎಲ್ ಮಾನದಂಡಗಳಿಂದ ಅನೇಕ ಬಡವರು ಹೊರಗುಳಿಯುತ್ತಿದ್ದಾರೆ. ರೇಷನ್ ಕಾರ್ಡ್ ವ್ಯವಸ್ಥೆಯನ್ನು ಸಾರ್ವತ್ರೀಕರಣಗೊಳಿಸಿ, ಅಗತ್ಯವಿರುವವರಿಗೆ ತಕ್ಷಣ ಕಾರ್ಡ್ ನೀಡಬೇಕು. ಹಬ್ಬದ ಸಂದರ್ಭಗಳಲ್ಲಿ ಕೇರಳ ಮಾದರಿಯಲ್ಲಿ ಹೆಚ್ಚುವರಿ ಆಹಾರ ಕಿಟ್ ವಿತರಿಸಬೇಕು ಎಂದು ಒತ್ತಾಯಿಸಲಾಗಿದೆ.
ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಹೆಸರಿನಲ್ಲಿ ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣ ನಿಲ್ಲಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 24×7 ವೈದ್ಯರು, ನರ್ಸ್ ಹಾಗೂ ಆಂಬುಲೆನ್ಸ್ ಸೌಲಭ್ಯ ಒದಗಿಸಬೇಕು. ಎಲ್ಲಾ ರೀತಿಯ ಚಿಕಿತ್ಸೆ ಉಚಿತವಾಗಿರಬೇಕು ಎಂದು ಆಗ್ರಹಿಸಲಾಗಿದೆ.
ವೃದ್ಧರು, ವಿಕಲಚೇತನರು, ಗಂಡ ತೀರಿದ ಹಾಗೂ ಒಂಟಿ ಮಹಿಳೆಯರಿಗೆ ನೀಡುವ ಪಿಂಚಣಿ ಜೀವನೋಪಾಯಕ್ಕೆ ಸಾಲುತ್ತಿಲ್ಲ. ಮುಂಬರುವ ಬಜೆಟ್ನಲ್ಲಿ ಮಾಸಿಕ ಪಿಂಚಣಿಯನ್ನು ₹5000ಕ್ಕೆ ಏರಿಸಬೇಕು ಎಂದು ಒತ್ತಾಯಿಸಲಾಗಿದೆ.
ಸಮಾವೇಶದಲ್ಲಿ ಜಿಲ್ಲಾ ಕಾರ್ಯದರ್ಶಿ ಪ್ರಮೀಳ ದಕ್ಷಿಣ ಕನ್ನಡ ಜಿಲ್ಲೆಯಿಂದ 100ಕ್ಕೂ ಹೆಚ್ಚು ಮಹಿಳೆಯರು ‘ಬೆಂಗಳೂರು ಚಲೋ’ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ. ಜಿಲ್ಲಾ ಅಧ್ಯಕ್ಷೆ ಕಿರಣ್ ಪ್ರಭಾ, ಮಂಗಳೂರು ನಗರ ಕಾರ್ಯದರ್ಶಿ ಅಸುಂತ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಕ್ಕೊತ್ತಾಯಗಳು ಯಾವುದು?
1.ವಿ.ಬಿ. ಗ್ರಾಮ್. ಜಿ ಯೋಜನೆ ಹಿಂಪಡೆಯಬೇಕು, ಮನರೇಗಾ ಉದ್ಯೋಗ ಖಾತ್ರಿ ಹಕ್ಕನ್ನು ಬಲಪಡಿಸಬೇಕು, ನಗರ ಉದ್ಯೋಗ ಖಾತ್ರಿ ಕಾಯ್ದೆ ಜಾರಿಗೊಳಿಸಬೇಕು, ದಿನಗೂಲಿ 600 ರೂ.ಗಳಿಗೆ ಹೆಚ್ಚಿಸಬೇಕು ಹಾಗೂ ವರ್ಷಕ್ಕೆ ಕನಿಷ್ಠ 200 ದಿನಗಳ ಕೆಲಸ ನೀಡಬೇಕು.
2.ಮುಂಬರುವ ಬಜೆಟ್ ಅಧಿವೇಶನದಲ್ಲಿಯೇ ಮರ್ಯಾದೆಗೇಡು ಹತ್ಯೆ ನಿಷೇಧ ಕಾಯ್ದೆಗಾಗಿ ಮಸೂದೆಯನ್ನು ಮಂಡಿಸಿ, ಅಂಗೀಕರಿಸಿ ಜಾರಿ ಮಾಡಬೇಕು.
3.ನ್ಯಾಯಮೂರ್ತಿ ವರ್ಮಾ ಆಯೋಗದ ಎಲ್ಲ ಶಿಫಾರಸ್ಸು ಹಾಗೂ ಕರ್ನಾಟಕ ರಾಜ್ಯದ ಉಗ್ರಪ್ಪ ಸಮಿತಿ ಶಿಫಾರಸ್ಸು ಜಾರಿ ಮಾಡಬೇಕು.
4.ಧರ್ಮಸ್ಥಳದ ಅತ್ಯಾಚಾರ, ಕೊಲೆ, ಅಸಹಜ ಸಾವು, ಭೂ ಕಬಳಿಕೆ, ಸ್ವ- ಸಹಾಯ ಸಂಘಗಳ ಮೇಲಿನ ದೌರ್ಜನ್ಯ ಸೇರಿದಂತೆ ಮೇಲಿನ ಎಲ್ಲ ಪ್ರಕರಣಗಳನ್ನು ಎಸ್.ಐ.ಟಿ. ಮೂಲಕ ಸಮಗ್ರ ತನಿಖೆಗೆ ಒಳಪಡಿಸಬೇಕು.
5.ಮೈಕ್ರೋ ಪೈನಾನ್ಸ್ ಸಂಸ್ಥೆಗಳ ಕಿರುಕುಳ ತಡೆಗಟ್ಟಿ, ನಾಯಿ ಕೊಡೆಗಳಂತೆ ಹಾದಿಗೊಂದು ಬೀದಿಗೊಂದು ಹುಟ್ಟಿಕೊಂಡು ದುಬಾರಿ ಬಡ್ಡಿ ಹಾಗೂ ವಾರದ ಕಂತು ಕಟ್ಟುವಂತೆ ಕಿರುಕುಳ ನೀಡುತ್ತಿರುವ ಸಂಸ್ಥೆಗಳಿಗೆ ಕಡಿವಾಣ ಹಾಕಬೇಕು.
6.ಸ್ವ-ಸಹಾಯ ಗುಂಪುಗಳಿಗೆ ಶೇ.4 ರ ಬಡ್ಡಿ ದರದಲ್ಲಿ ಬ್ಯಾಂಕ್ ಸಾಲ ನೀಡಬೇಕು. ಬಡ ಕೂಲಿಕಾರ, ರೈತ ಮಹಿಳೆಯರಿಗೆ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ರಿಸರ್ವ್ ಬ್ಯಾಂಕ್ ನಿರ್ದೇಶನದಂತೆ
ಜಾಮೀನು ರಹಿತವಾಗಿ ಕನಿಷ್ಠ ಎರಡು ಲಕ್ಷದವರಗೆ ಸಾಲವನ್ನು ಮಂಜೂರು ಮಾಡಬೇಕು.
7.ಉದ್ಯೋಗ ಖಾತ್ರಿ ಕಾಯ್ದೆಯಲ್ಲಿ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ NRLM ಶೆಡ್ ನಿರ್ಮಾಣ ಮಾಡಬೇಕು. ಸಂಜೀವಿನಿ ಒಕ್ಕೂಟಕ್ಕೆ ಒಂದು ಕೋಟಿ ಹಣ ಬಿಡುಗಡೆ ಮಾಡಿ SHG ಗುಂಪುಗಳಿಗೆ ತರಬೇತಿ, ಕಚ್ಚಾ ವಸ್ತುಗಳನ್ನು ನೀಡಿ, ತಯಾರಿಸಿದ ವಸ್ತುಗಳಿಗೆ ಸರ್ಕಾರ ಮಾರುಕಟ್ಟೆ ವ್ಯವಸ್ಥೆ ಒದಗಿಸಬೇಕು.
8.ನಿವೇಶನ ರಹಿತರಿಗೆ ನಿವೇಶನ ನೀಡಿ, ವಸತಿ ನಿರ್ಮಿಸಿಕೊಳ್ಳಲು ಕನಿಷ್ಠ ಐದು ಲಕ್ಷ ಅನುದಾನ ನೀಡಬೇಕು.
9.ಸಾಮಾಜಿಕ ಭದ್ರತಾ ಯೋಜನೆಯಡಿ ನೀಡುವ ಮಾಸಿಕ ವೇತನವನ್ನು ವಯಸ್ಸಿನ ಮಿತಿ ಇಲ್ಲದೆ ಒಂಟಿ ಮಹಿಳೆ, ಗಂಡ ಸತ್ತ ಮಹಿಳೆ, ಪರಿತ್ಯಕ್ತ ಮಹಿಳೆಯರು ಹಾಗೂ ವಿಕಲ ಚೇತನರಿಗೆ 5000 ರೂ. ಮಾಸಿಕ ವೇತನ ನೀಡಬೇಕು.
10.ರೇಷನ್ ಕಾರ್ಡ್ ವ್ಯವಸ್ಥೆಯನ್ನು ಸಾರ್ವತ್ರೀಕರಣಗೊಳಿಸಿ ಎಲ್ಲ ಹಳ್ಳಿಗಳಲ್ಲಿ ಪಡಿತರ ವಿತರಣ ಉಪ ಕೇಂದ್ರಗಳನ್ನ ಸ್ಥಾಪಿಸಬೇಕು.
11.ಕರ್ನಾಟಕ ರಾಜ್ಯದ ಎಲ್ಲ ಗ್ರಾಮಗಳಿಗೂ ಸಾರಿಗೆ ಸೌಲಭ್ಯ ಒದಗಿಸಬೇಕು.
12.ಸಾರ್ವಜನಿಕ ಆರೋಗ್ಯ ರಂಗವನ್ನು ಬಲಪಡಿಸಿ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 24 -7 ಡಾಕ್ಟರ್, ನರ್ಸ್, ಆಂಬುಲೆನ್ಸ್ ವ್ಯವಸ್ಥೆ ಇರಬೇಕು. ರಕ್ತ ಪರೀಕ್ಷೆ ಹಾಗೂ ಎಲ್ಲ ರೀತಿ ಚಿಕಿತ್ಸೆ ನೀಡುವಂತಾಗಬೇಕು.







