




ಬೆಂಗಳೂರು : ಸರಕಾರದ ಆದೇಶದಂತೆ ರಾಜ್ಯದ ಬಹುತೇಕ ಸರಕಾರಿ ವಿಶ್ವ ವಿದ್ಯಾನಿಲಯಗಳು ಮುದ್ರಿತ ಅಂಕಪಟ್ಟಿಗಳನ್ನು ವಿದ್ಯಾರ್ಥಿಗಳಿಗೆ ವಿತರಿಸುವುದನ್ನು ಸ್ಥಗಿತ ಮಾಡಿದ್ದು, ಶೈಕ್ಷಣಿಕ ದಾಖಲೆಗಳಾದ ಅಂಕಪಟ್ಟಿ, ಪದವಿ ಪ್ರಮಾಣಪತ್ರಗಳನ್ನು ಡಿಜಿಲಾಕರ್‌ನಲ್ಲಿಯೂ ಅಪ್‌ಲೋಡ್ ಮಾಡುತ್ತಿಲ್ಲ. ಇದರಿಂದ ಸಾವಿರಾರು ವಿದ್ಯಾರ್ಥಿಗಳು ಶೈಕ್ಷಣಿಕ ದಾಖಲೆಗಳಿಗಾಗಿ ಪರದಾಡುವಂತಾಗಿದೆ.

ಸರಕಾರದ ಸೂಚನೆಯ ಮೇರೆಗೆ ರಾಜ್ಯದ ಸರಕಾರಿ ವಿಶ್ವವಿದ್ಯಾನಿಲಯಗಳು ನಾಲ್ಕು ವರ್ಷಗಳಿಂದ ಮುದ್ರಿತ ಅಂಕಪಟ್ಟಿ ನೀಡುವುದನ್ನು ಸ್ಥಗಿತಗೊಳಿಸಿವೆ. ಡಿಜಿಲಾಕರ್‌ನಲ್ಲಿ ಅಂಕಪಟ್ಟಿಗಳನ್ನು ಪಡೆದುಕೊಳ್ಳಬೇಕು ಎಂದು ರಾಜ್ಯ ಸರಕಾರವು ಆದೇಶವನ್ನೂ ಹೊರಡಿಸಿದೆ. ನಕಲಿ ಅಂಕಪಟ್ಟಿ ವಿತರಣೆಯನ್ನು ತಡೆಯಲು ಮತ್ತು ಡಿಜಿಟಲ್ ದಾಖಲೀಕರಣಕ್ಕಾಗಿ ಸರಕಾರ ಈ ಉಪಕ್ರಮವನ್ನು ಅನುಸರಿಸುತ್ತಿದೆ. ಆದರೆ ವಿಶ್ವವಿದ್ಯಾನಿಲಯಗಳು ಡಿಜಿಲಾಕರ್‌ನಲ್ಲಿಯೂ ಅಂಕಪಟ್ಟಿಗಳನ್ನು ಅಪ್‌ಲೋಡ್ ಮಾಡುತ್ತಿಲ್ಲ. ಇತ್ತ ಮುದ್ರಿತ ಅಂಕಪಟ್ಟಿಗಳನ್ನು ವಿತರಿಸದಿರುವುದು ಬೆಳಕಿಗೆ ಬಂದಿದೆ.
ಇನ್ನೂ ‘ಡಿಜಿಲಾಕರ್‌ನಲ್ಲಿ ದಾಖಲೆಗಳು ಲಭ್ಯವಿಲ್ಲದಿದ್ದರೆ, ವಿದ್ಯಾರ್ಥಿಗಳು ಕಾಲೇಜು ಅಥವಾ ವಿಶ್ವವಿದ್ಯಾನಿಲಯದ ಕಚೇರಿಯನ್ನು ಸಂಪರ್ಕಿಸಿ, ಡಿಜಿಲಾಕರ್‌ನಲ್ಲಿ ಅಪ್‌ಲೋಡ್ ಮಾಡಲು ವಿನಂತಿಸಬಹುದು’ ಎಂದು ರಾಜ್ಯ ಸರಕಾರವು ವಿದ್ಯಾರ್ಥಿಗಳಿಗೆ ಸಹಾಯವಾಣಿ ಮೂಲಕ ಮಾಹಿತಿಯನ್ನು ನೀಡುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಪದವಿ ಹಾಗೂ ಸ್ನಾತಕೋತ್ತರ ಮುಗಿಸಿ ನಾಲ್ಕು ವರ್ಷಗಳು ಕಳೆದರೂ ಅಂಕಪಟ್ಟಿ, ಕಾನ್ವಕೇಷನ್‌ಗಳಿಗಾಗಿ ವಿಶ್ವವಿದ್ಯಾನಿಲಯಗಳ ಆಡಳಿತ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಅಂಕಪಟ್ಟಿಗಳಿಲ್ಲದೆ ವಿದ್ಯಾರ್ಥಿಗಳು ಉದ್ಯೋಗಕ್ಕೆ ಮತ್ತು ಉನ್ನತ ವ್ಯಾಸಂಗಕ್ಕೆ ಅರ್ಜಿಗಳನ್ನು ಸಲ್ಲಿಸಲು ಸಾಧ್ಯವಾಗದೆ ಅತಂತ್ರ ಸ್ಥಿತಿಯಲ್ಲಿ ಸಿಲುಕಿದ್ದಾರೆ.
ಉನ್ನತ ಶಿಕ್ಷಣ ಸಚಿವರ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದಲ್ಲಿಯೇ ಇಂತಹ ವಾತಾವರಣ ಸೃಷ್ಟಿಯಾಗಿದ್ದು, ಅಂಕಪಟ್ಟಿಗಳಿಗಾಗಿ ನೂರಾರು ವಿದ್ಯಾರ್ಥಿಗಳು ಪ್ರತಿನಿತ್ಯ ವಿಶ್ವವಿದ್ಯಾನಿಲಯಕ್ಕೆ ತೆರಳಿ, ವಾಪಸ್ ಆಗುತ್ತಿರುವುದು ಬೆಳಕಿಗೆ ಬಂದಿದೆ.
ನಾನು 2023ರಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದು, ನನ್ನ ಅಂಕಪಟ್ಟಿಗಳನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯವು ಇದುವರೆಗೂ ನೀಡಿಲ್ಲ. ಡಿಜಿಲಾಕರ್‌ನಲ್ಲಿಯೂ ನನ್ನ ಅಂಕಪಟ್ಟಿ ಸಿಗುತ್ತಿಲ್ಲ. ಯುಯುಸಿಎಂಎಸ್ ಪೋರ್ಟಲ್‌ನಲ್ಲಿ ಅಂಕಪಟ್ಟಿಗಳನ್ನು ಡೌನ್‌ಲೋಡ್ ಮಾಡಿಕೊಂಡು, ಅದರ ಮೇಲೆ ವಿಶ್ವವಿದ್ಯಾನಿಲಯದ ಮೌಲ್ಯಮಾಪನ ವಿ‘ಾಗದ ಕುಲಸಚಿವರು ಸಹಿ ಮಾಡಿ ಅಂಕಪಟ್ಟಿಯನ್ನು ನೀಡುತ್ತಿದ್ದಾರೆ. ಆದರೆ ಈ ಅಂಕಪಟ್ಟಿಗಳನ್ನು ಎಲ್ಲಿಯೂ ಮಾನ್ಯತೆ ಮಾಡುತ್ತಿಲ್ಲ.
-ಗೌತಮ್, ಸ್ನಾತಕೋತ್ತರ ಪದವಿಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿ
ಯುಜಿಸಿ ಮತ್ತು ಉನ್ನತ ಶಿಕ್ಷಣ ಇಲಾಖೆಯ ಆದೇಶಗಳಂತೆ ಡಿಜಿಲಾಕರ್‌ನಲ್ಲಿರುವ ದಾಖಲೆಗಳು ಮಾನ್ಯವಾಗಿರುತ್ತವೆ. ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಪದವಿ ಮತ್ತು ಸ್ನಾತಕೋತ್ತರ ಪದವಿಗಳ ಅಂಕಪಟ್ಟಿಗಳನ್ನು ನೀಡುವವರೆಗೆ ಯುಯುಸಿಎಂಎಸ್ ಪೋರ್ಟಲ್‌ನಲ್ಲಿರುವ ಅಂಕಪಟ್ಟಿಗಳಿಗೆ ಸಹಿ ಹಾಕಿ ನೀಡಲಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಯುಯುಸಿಎಂಎಸ್ ಪೋರ್ಟಲ್‌ನಲ್ಲಿರುವ ಅಂಕಪಟ್ಟಿಗಳ ನಕಲನ್ನು ಇರಿಸಿಕೊಳ್ಳಬೇಕು. ಉನ್ನತ ಅಧ್ಯಯನ ಮತ್ತು ಉದ್ಯೋಗದ ಉದ್ದೇಶಕ್ಕಾಗಿ ಅವುಗಳನ್ನು ಪ್ರಸ್ತುತಪಡಿಸಬಹುದು. ಈ ಸುತ್ತೋಲೆಯು ಅಂಕಪಟ್ಟಿಗಳ ಸಿಂಧುತ್ವಕ್ಕೆ ಸಂಬಂಧಿಸಿದಂತೆ ಎಲ್ಲ ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯೋಗದಾತರಿಗೆ ಅಧಿಕೃತ ಪತ್ರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಬೆಂಗಳೂರು ಉತ್ತರ ವಿವಿಯ ಮೌಲ್ಯಮಾಪನ ವಿಭಾಗದ ಕುಲಸಚಿವರು ಆದೇಶವೊಂದನ್ನು ಹೊರಡಿಸಿದ್ದಾರೆ.








