




ಕೊಡಗು : ನಿಂತಿದ್ದ ಟ್ಯಾಂಕರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಿರುತೆರೆ ನಟರೊಬ್ಬರು ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಆನೆಕಾಡು ಅರಣ್ಯ ಪ್ರದೇಶದ ಬಳಿ ನಡೆದಿದೆ.
ಚಲನಚಿತ್ರ ಹಾಗೂ ಕಿರುತೆರೆ ಸಹ ಕಲಾವಿದ ಹರೀಶ್(40) ಮೃತಪಟ್ಟ ವ್ಯಕ್ತಿ. ಬಹುಮುಖ ಪ್ರತಿಭೆಯಾಗಿದ್ದ ಇವರು ವೃತ್ತಿಜೀವನದ ಜೊತೆಗೆ ಹಲವು ಕನ್ನಡ ಸಿನಿಮಾಗಳಲ್ಲಿ ಸಹ ಕಲಾವಿದನಾಗಿ ಮತ್ತು ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ತಮ್ಮನ್ನು ಗುರುತಿಸಿಕೊಂಡಿದ್ದರು.
ಶನಿವಾರ ಕೆಲಸ ಮುಗಿಸಿಕೊಂಡು ತಡರಾತ್ರಿ ಹರೀಶ್ ಅವರು ಕುಶಾಲನಗರದಿಂದ ತಮ್ಮ ಸ್ವಗ್ರಾಮವಾದ ಹೊಸಕೋಟೆಗೆ ಕಾರಿನಲ್ಲಿ ತೆರಳುತ್ತಿದ್ದಾಗ, ರಸ್ತೆ ಬದಿಯಲ್ಲಿ ನಿಂತಿದ್ದ ಟ್ಯಾಂಕರ್‌ಗೆ ಕಾರು ವೇಗವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಹರೀಶ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ.








