
ಹೊಸದಿಲ್ಲಿ: ಜಾಮೀನು ಮಂಜೂರು ಮಾಡಬೇಕಾದರೆ ಪೊಲೀಸ್ ಠಾಣೆಗಳನ್ನು ಒರೆಸುವಂತಹ ಷರತ್ತು ವಿಧಿಸಿದ್ದ ಒಡಿಶಾದ ಕೆಲವು ನ್ಯಾಯಾಲಯಗಳ ವಿರುದ್ಧ ಸುಪ್ರೀಂ ಕೋರ್ಟ್ ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಇಂತಹ ಷರತ್ತುಗಳನ್ನು ಮುಖ್ಯವಾಗಿ ದಲಿತ ಹಾಗೂ ಆದಿವಾಸಿ ಸಮುದಾಯಗಳಿಗೆ ಸೇರಿದ ಆರೋಪಿಗಳ ಮೇಲೆ ಹೇರಲಾಗಿದ್ದುನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ.ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ ಮಲ್ಯ ಬಾಗ್ನಿ ಅವರನ್ನೊಳಗೊಂಡ ನ್ಯಾಯಪೀಠ, ಈ ರೀತಿಯ ಆದೇಶಗಳು ಮಾನವ ಹಕ್ಕುಗಳನ್ನು ಉಲ್ಲಂಘಿಸುವುದರ ಜೊತೆಗೆ ಆರೋಪಿಗಳ ಘನತೆಯ ಮೇಲೆ ನೇರ ಪ್ರಹಾರವಾಗುತ್ತವೆ ಎಂದು ಕಿಡಿಕಾರಿತು.
ಆರೋಪಿಗಳ ಘನತೆಯನ್ನು ಕುಗ್ಗಿಸುವ ಮತ್ತು ಮೇಲ್ನೋಟಕ್ಕೇ ಮಾನವ ಹಕ್ಕುಗಳನ್ನು ಉಲ್ಲಂಘಿಸುವಂತಹ ಪ್ರತಿಗಾಮಿ ಮನೋಭಾವವನ್ನು ಒಡಿಶಾ ನ್ಯಾಯಾಂಗ ತೋರಿರುವುದು ನಮ್ಮಲ್ಲಿ ತೀವ್ರ ಅಸಮಾಧಾನ ಹಾಗೂ ಬೇಸರ ಉಂಟುಮಾಡಿದೆ. ನಾವು ಇದನ್ನು ತೀವ್ರವಾಗಿ ತಿರಸ್ಕರಿಸುತ್ತೇವೆ,” ಎಂದು ನ್ಯಾಯಪೀಠ ಹೇಳಿದೆ.ಇಂತಹ ಷರತ್ತುಗಳು ಅಂಚಿನ ಸಮುದಾಯಗಳ ವಿರುದ್ಧದ ಜಾತಿ ಪಕ್ಷಪಾತವನ್ನು ಬಯಲಿಗೆಳೆಯುತ್ತವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. “ಆರೋಪಿಗಳು ಅಂಚಿನ ಸಮುದಾಯಗಳಿಗೆ ಸೇರಿದವರಾಗಿರುವುದರಿಂದ ಇಂತಹ ಷರತ್ತುಗಳನ್ನು ವಿಧಿಸಲಾಗುತ್ತಿದೆ ಎಂಬುದು ನ್ಯಾಯಾಂಗದ ಪಕ್ಷಪಾತವನ್ನು ಸೂಚಿಸುತ್ತದೆ.
ಸ್ಥಿತಿವಂತರಿಗೆ ಜಾಮೀನು ನೀಡುವಾಗ ಇಂತಹ ಷರತುಗಳನ್ನು ವಿಧಿಸಲಾಗುತ್ತಿಲ್ಲ ಎಂಬ ವಾದವೂ ಸಮರ್ಥವಾಗಿದೆ,” ಎಂದು ನ್ಯಾಯಪೀಠ ಗಮನಸೆಳೆದಿದೆ.ಷರತ್ತುಗಳ ಸ್ವರೂಪವೇ ಕ್ರೂರ ಹಾಗೂ ಅಸಹ್ಯಕರವಾಗಿದ್ದು, ಅವು ನ್ಯಾಯಾಂಗವೇ ಜಾತಿಯಾಧಾರಿತವಾಗಿದೆ ಎಂಬ ಭಾವನೆ ಮೂಡಿಸುವಷ್ಟು ಗಂಭೀರವಾಗಿವೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. “ಸಂವಿಧಾನವು ಜನತೆಗೆ ನೀಡಿರುವ ಅಮೂಲ್ಯ ಉಡುಗೊರೆ ಜಾತಿರಹಿತ ಸಮಾಜ ನಿರ್ಮಾಣ. ಈ ಮೌಲ್ಯಗಳನ್ನು ರಕ್ಷಿಸುವ ಹೊಣೆಗಾರಿಕೆ ನ್ಯಾಯಾಂಗದ ಮೇಲಿದೆ.
75 ವರ್ಷಗಳ ಸಾಂವಿಧಾನಿಕ ಪಯಣದಲ್ಲಿ ನ್ಯಾಯಾಂಗವು ಜನರ ಹಕ್ಕುಗಳನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ,” ಎಂದು ಹೇಳಿದೆ.ಈ ಹಿನ್ನೆಲೆಯಲ್ಲಿ ಒಡಿಶಾ ನ್ಯಾಯಾಲಯಗಳು ವಿಧಿಸಿದ್ದ ಇಂತಹ ಷರತ್ತುಗಳನ್ನು ಸುಪ್ರೀಂ ಕೋರ್ಟ್ ಅನೂರ್ಜಿತ ಹಾಗೂ ನಿರರ್ಥಕ ಎಂದು ಘೋಷಿಸಿದೆ. ಇವುಗಳನ್ನು ರದ್ದುಪಡಿಸಲು ಆರೋಪಿಗಳು ಒಡಿಶಾ ಹೈಕೋರ್ಟ್ ಮೊರೆ ಸಿಗಬಹುದೆಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.ರಾಜ್ಯ ನ್ಯಾಯಾಂಗ ವಿಧಿಸಿರುವ ಇಂತಹ ಷರತ್ತುಗಳು ಹಾಗೂ ಅವುಗಳಿಗೆ ಸಮಾನವಾದ ಪದಗಳನ್ನು ಹೊಂದಿರುವ ಎಲ್ಲ ಷರತ್ತುಗಳನ್ನು ಅಮಾನ್ಯ ಎಂದು ಘೋಷಿಸುತ್ತಿದ್ದೇವೆ. ಇಂತಹ ಷರತ್ತುಗಳನ್ನು ರದ್ದುಪಡಿಸಲು ಹಾಗೂ ಮುಂದೆಯೂ ಇವುಗಳನ್ನು ವಿಧಿಸದಂತೆ ಕ್ರಮ ಕೈಗೊಳ್ಳಲು ಆರೋಪಿಗಳಿಗೆ ಹೈಕೋರ್ಟ್ ಮೊರೆ ಹೋಗುವ ಸ್ವಾತಂತ್ರ್ಯವಿದೆ.
ಆರೋಪಿಗಳು ಜಾಮೀನಿನ ಮೇಲೆಯೇ ಮುಂದುವರಿಯುತ್ತಾರೆ,” ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.ಜಾತಿ ಬಣ್ಣ ಹೊಂದಿರುವ ಹಾಗೂ ಸಾಮಾಜಿಕ ವೈಷಮ್ಯಕ್ಕೆ ಕಾರಣವಾಗುವ ಇಂತಹ ಷರತ್ತುಗಳನ್ನು ವಿಧಿಸುವುದರಿಂದ ನ್ಯಾಯಾಲಯಗಳು ದೂರವಿರಬೇಕು ಎಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ.







