




ಬೆಳಗಾವಿ: ಜಿಲ್ಲೆಯ ಬೆಳಗಾವಿ ತಾಲೂಕಿನ ಹೊನಗಾ ಗ್ರಾಮದ ಕೈಗಾರಿಕಾ ಪ್ರದೇಶದ ಡಾಂಗೆ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಪ್ಲಾಸ್ಟಿಕ್ ವಸ್ತುಗಳು ಹಾಗೂ ಯಂತ್ರೋಪಕರಣಗಳು ಸುಟ್ಟು ಕರಕಲಾಗಿವೆ.
ತಡರಾತ್ರಿ ಕಂಪನಿಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಪ್ಲಾಸ್ಟಿಕ್ ವಸ್ತುಗಳು ಹೆಚ್ಚಾಗಿದ್ದರಿಂದ ಬೆಂಕಿ ಕ್ಷಣಾರ್ಧದಲ್ಲಿ ಕಾರ್ಖಾನೆಯಾದ್ಯಂತ ವ್ಯಾಪಿಸಿದ್ದು, ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಮಯಪ್ರಜ್ಞೆಯಿಂದಾಗಿ ಬೆಂಕಿ ಪಕ್ಕದ ಕಾರ್ಖಾನೆಗಳಿಗೆ ಹರಡುವುದು ತಪ್ಪಿದ್ದು, ದೊಡ್ಡ ಮಟ್ಟದ ಅನಾಹುತವನ್ನು ತಡೆದಂತಾಗಿದೆ.
ಪ್ರಾಥಮಿಕ ವರದಿಯ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕಾರ್ಖಾನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಪ್ಲಾಸ್ಟಿಕ್ ಕಚ್ಚಾ ವಸ್ತುಗಳು ಹಾಗೂ ಸಿದ್ಧಪಡಿಸಿದ ಉತ್ಪನ್ನಗಳು ಬೆಂಕಿಗೆ ಆಹುತಿಯಾಗಿವೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಪ್ರಸ್ತುತ ಈ ಘಟನೆಯು ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ.








