
ಬಂಟ್ವಾಳ: ಅಪ್ರಾಪ್ತ ಬಾಲಕರಿಗೆ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ನೀಡಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ವಾಹನಗಳ ಮಾಲೀಕರಿಗೆ ತಲಾ ₹25 ಸಾವಿರ ದಂಡ ವಿಧಿಸಿ ಮಾನ್ಯ ನ್ಯಾಯಾಲಯ ಆದೇಶಿಸಿದೆ.




ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮೆಲ್ಕಾರ್‌ನಲ್ಲಿ 2026ರ ಏಪ್ರಿಲ್ 6ರಂದು KA-19-HT-9694 ನೋಂದಣಿಯ ದ್ವಿಚಕ್ರ ವಾಹನವನ್ನು ಅಪ್ರಾಪ್ತ ಬಾಲಕ ಚಲಾಯಿಸುತ್ತಿರುವುದು ವಾಹನ ತಪಾಸಣೆ ವೇಳೆ ಪೊಲೀಸರಿಗೆ ಪತ್ತೆಯಾಯಿತು. ಇದೇ ರೀತಿ ಏಪ್ರಿಲ್ 28ರಂದು ಬಿಸಿ ರೋಡ್ ಬಳಿ KA-05-KG-6785 ನೋಂದಣಿಯ ಮತ್ತೊಂದು ದ್ವಿಚಕ್ರ ವಾಹನವನ್ನು ಕೂಡ ಅಪ್ರಾಪ್ತ ಬಾಲಕ ಚಾಲನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಅಪ್ರಾಪ್ತರಿಗೆ ವಾಹನ ಚಾಲನೆಗೆ ಅವಕಾಶ ನೀಡಿದ ಆರೋಪದಡಿ ಸಂಬಂಧಿತ ವಾಹನ ಮಾಲೀಕರ ವಿರುದ್ಧ ಬಂಟ್ವಾಳ ಸಂಚಾರ ಠಾಣೆ ಪೊಲೀಸರು ಭಾರತೀಯ ಮೋಟಾರು ವಾಹನ ಕಾಯ್ದೆಯ ಕಲಂ 199(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿ, ಮಾನ್ಯ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಮೇ 18ರಂದು ನಡೆಸಿದ ನ್ಯಾಯಾಲಯವು ಎರಡೂ ವಾಹನಗಳ ಮಾಲೀಕರಿಗೆ ತಲಾ ₹25 ಸಾವಿರ ದಂಡ ವಿಧಿಸಿ ಆದೇಶಿಸಿದೆ.










