





ಮಂಗಳೂರು: ವೃದ್ದ ಮಹಿಳೆಯೊಬ್ಬರ ಕುತ್ತಿಗೆಯಿಂದ ಬಂಗಾರದ ಸರ ಕಸಿದುಕೊಂಡ ಪ್ರಕರಣವನ್ನು ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ ಮತ್ತೋರ್ವ ಪರಾರಿಯಾದ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಜೂನ್ 14ರಂದು ಮಧ್ಯಾಹ್ನ ಸುಮಾರು 12.30 ಗಂಟೆಗೆ ಎಕ್ಕೂರು ಬಸ್ ನಿಲ್ದಾಣದಲ್ಲಿ ಇಳಿದು ಸೂಟರ್ಪೇಟೆ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಸಮೀಪ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಬಳಿ ಮೋಟಾರ್‌ಸೈಕಲ್‌ನಲ್ಲಿ ಬಂದ ಇಬ್ಬರು ಅಪರಿಚಿತರು ವಿಳಾಸ ಕೇಳುವ ನೆಪದಲ್ಲಿ ಸುಮಾರು 12 ಗ್ರಾಂ ತೂಕದ ಲಕ್ಷ್ಮಿ ಪೆಂಡೆಂಟ್ ಹೊಂದಿದ್ದ ಬಂಗಾರದ ಸರವನ್ನು ಕಸಿದು ಪರಾರಿಯಾಗಿದ್ದರು. ಕಳುವಾದ ಸರದ ಅಂದಾಜು ಮೌಲ್ಯ ₹1.50 ಲಕ್ಷವಾಗಿದ್ದು, ಈ ಕುರಿತು ಮಂಗಳೂರು ದಕ್ಷಿಣ ಪೊಲೀಸ್ ನೀಡಿದ ದೂರಿನ ಆಧಾರದ ಮೇಲೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಅ.ಕ್ರ 124/2026 ಕಲಂ: 309(6) ಬಿ.ಎನ್.ಎಸ್.2023 ಪ್ರಕರಣ ದಾಖಲಾಗಿರುತ್ತದೆ.
ಜೂನ್ 26ರಂದು ಬೆಳಿಗ್ಗೆ ಪಾಂಡೇಶ್ವರದ ರೋಸಾರಿಯೋ ಶಾಲೆ ಸಮೀಪ ಮೂವರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಆರೋಪಿಗಳು ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳಾದ ರವಿ ಬೌರಾ (38), ಮೊಹಮ್ಮದ್ ಸಾಹಿಲ್ @ ಸಿದ್ದೀಖಿ (26) ಹಾಗೂ ಅಲ್ತಾಫ್ ಹುಸೈನ್ ಅವರನ್ನು ಠಾಣೆಗೆ ಕರೆತರುತ್ತಿದ್ದ ವೇಳೆ ಅಲ್ತಾಫ್ ಹುಸೈನ್ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ವಿನಾಯಕ ಅವರಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಈ ಸಂಬಂಧ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.
ರವಿ ಬೌರಾ ಹಾಗೂ ಮೊಹಮ್ಮದ್ ಸಾಹಿಲ್ @ ಸಿದ್ದೀಖಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಇಬ್ಬರು ಆರೋಪಿಗಳಿಗೆ ಜುಲೈ 6ರವರೆಗೆ 10 ದಿನಗಳ ಪೊಲೀಸ್ ಕಸ್ಟಡಿ ನೀಡಿದೆ. ಪರಾರಿಯಾಗಿರುವ ಅಲ್ತಾಫ್ ಹುಸೈನ್ ಬಂಧನಕ್ಕಾಗಿ ವಿಶೇಷ ತಂಡವನ್ನು ರಚಿಸಿ ಶೋಧ ಕಾರ್ಯ ಮುಂದುವರಿಸಲಾಗಿದೆ. ಮಂಗಳೂರು ಕೇಂದ್ರ ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ಪ್ರಕರಣವನ್ನು ತ್ವರಿತವಾಗಿ ಭೇದಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.








