


ನವದೆಹಲಿ: ಸಿನಿಮಾ ಹಾಗೂ ವೆಬ್ಸಿರೀಸ್ಗಳ ಪೈರಸಿ ತಡೆಯುವ ಉದ್ದೇಶದಿಂದ ಕಾನೂನುಬಾಹಿರ ಸಿನಿಮಾ, ಒಟಿಟಿ ಕಂಟೆಂಟ್ ವಿರುದ್ಧ ಕ್ರಮ ಕೈಗೊಂಡು, ಆ ವರದಿಯನ್ನು 15 ದಿನದೊಳಗೆ ಸಲ್ಲಿಸುವಂತೆ ಕೇಂದ್ರ ಸರ್ಕಾರವು ಟೆಲಿಗ್ರಾಂಗೆ ನೋಟಿಸ್ ನೀಡಿದೆ.
ಟೆಲಿಗ್ರಾಂನಲ್ಲಿ ಹರಿದಾಡುತ್ತಿರುವ ಪೈರೇಟೆಡ್ ಚಲನಚಿತ್ರಗಳು ಮತ್ತು ಒಟಿಟಿ ಕಂಟೆಂಟ್ಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನೋಟಿಸ್ ನೀಡಿದೆ. ಟೆಲಿಗ್ರಾಂನ ವಿವಿಧ ಚಾನೆಲ್ಗಳು ಮತ್ತು ಗುಂಪುಗಳ ಮೂಲಕ ಹೊಸ ಚಲನಚಿತ್ರಗಳು, ಒಟಿಟಿ ವೇದಿಕೆಗಳ ವಿಷಯಗಳು ಹಾಗೂ ಇತರೆ ಆಡಿಯೋ-ವಿಜುವಲ್ ಕೃತಿಗಳು ಅನಧಿಕೃತವಾಗಿ ಹಂಚಲಾಗುತ್ತಿರುವ ಬಗ್ಗೆ ಹಲವು ದೂರುಗಳು ಬಂದಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಈ ಹಿಂದೆ ಕೇಂದ್ರವು 3,000ಕ್ಕೂ ಹೆಚ್ಚು ಟೆಲಿಗ್ರಾಮ್ ಚಾನೆಲ್ಗಳ ವಿರುದ್ಧ ಕ್ರಮ ಕೈಗೊಂಡಿತ್ತು. ಇದೀಗ ಸರ್ಕಾರವು ಕೇವಲ ಪ್ರತ್ಯೇಕ ಪೈರಸಿ ಲಿಂಕ್ಗಳು ಅಥವಾ ಚಾನೆಲ್ಗಳನ್ನು ತೆಗೆದುಹಾಕುವ ಕ್ರಮಕ್ಕೆ ಸೀಮಿತವಾಗದೇ, ಸಂಪೂರ್ಣ ವೇದಿಕೆಯ ಜವಾಬ್ದಾರಿಯತ್ತ ಗಮನ ಹರಿಸಿದೆ. ಪೈರಸಿ ತಡೆಗೆ ಟೆಲಿಗ್ರಾಂ ಯಾವ ಕ್ರಮಗಳನ್ನು ಕೈಗೊಂಡಿದೆ? ಮುಂದಿನ ದಿನಗಳಲ್ಲಿ ಇಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ಯಾವ ವ್ಯವಸ್ಥೆ ರೂಪಿಸಲಿದೆ ಎಂಬುದನ್ನು 15 ದಿನಗಳೊಳಗೆ ವಿವರಿಸಬೇಕಾಗಿದೆ ಎಂದು ತಿಳಿದುಬಂದಿದೆ.







