
ಮಲ್ಪೆ: ಮಲ್ಪೆಯ ಉದ್ಯಮಿ ಸಂದೀಪ್ ಸಾಲಿಯಾನ್ ಅವರ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಮೂಲದ ಅಕ್ಷತಾ ಎಂ.ಕೆ. ಅಲಿಯಾಸ್ ರೂಪಶ್ರೀ ಅವರನ್ನು ಗೋವಾ ಪೊಲೀಸರು ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.ಸಂದೀಪ್ ಸಾಲಿಯಾನ್ ಅವರು ಮಲ್ಪೆಯ ನಿವಾಸಿಯಾಗಿದ್ದು, ಈ ಹಿಂದೆ ಮಾಜಿ ಸಚಿವರೊಬ್ಬರ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಬಳಿಕ ಚಾಲಕ ವೃತ್ತಿಯನ್ನು ತೊರೆದು ಮಲ್ಪೆಯಲ್ಲಿ ಜಲಕ್ರೀಡಾ ದೋಣಿಗಳ ಉದ್ಯಮ ಆರಂಭಿಸಿ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು.ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಗೋವಾಕ್ಕೆ ತೆರಳಿದ್ದ ಸಂದೀಪ್ ಸಾಲಿಯಾನ್ ಅವರಿಗೆ ಅಕ್ಷತಾ ಸಿಗರೇಟ್ ನೀಡಿದ್ದು, ಅದನ್ನು ಸೇವಿಸಿದ ಬಳಿಕ ಅವರು ಪ್ರಜ್ಞಾಹೀನ ಸ್ಥಿತಿಗೆ ಜಾರಿದ್ದಾರೆ ಎನ್ನಲಾಗಿದೆ.
ಬಳಿಕ ಅವರ ಕುತ್ತಿಗೆಯಲ್ಲಿದ್ದ ದಪ್ಪ ಚಿನ್ನದ ಸರವನ್ನು ಕಳವು ಮಾಡಿಕೊಂಡು ಅಕ್ಷತಾ ಪರಾರಿಯಾಗಿದ್ದಾಳೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಅವರ ಸಾವಿನ ನಿಖರ ಕಾರಣದ ಕುರಿತು ತನಿಖೆ ಮುಂದುವರಿದಿದೆ.ಗೋವಾ ಪೊಲೀಸರ ತನಿಖೆಯಲ್ಲಿ, ಅಕ್ಷತಾ ಶ್ರೀಮಂತರನ್ನು ಗುರಿಯಾಗಿಸಿಕೊಂಡು ಕ್ಯಾಸಿನೋಗಳಿಗೆ ಆಹ್ವಾನಿಸಿ, ಬಳಿಕ ಹೋಟೆಲ್ಗಳಿಗೆ ಕರೆದುಕೊಂಡು ಹೋಗಿ ಅಮಲು ಪದಾರ್ಥ ನೀಡಿ ಪ್ರಜ್ಞೆ ತಪ್ಪಿಸಿ ಚಿನ್ನಾಭರಣ ಹಾಗೂ ಹಣ ದರೋಡೆ ಮಾಡುತ್ತಿದ್ದಳು ಎಂಬ ಆರೋಪವೂ ಕೇಳಿಬಂದಿದೆ.
ಇದೇ ಮಾದರಿಯಲ್ಲಿ ಗುಜರಾತ್ ಮೂಲದ ಉದ್ಯಮಿ ತೋಮೇಶ್ ಯಾದವ್ ಅವರನ್ನು ಸಹ ಗೋವಾಕ್ಕೆ ಕರೆಸಿ ಪ್ರಜ್ಞೆ ತಪ್ಪಿಸಿ, ಸುಮಾರು ₹2.40 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿರುವ ಪ್ರಕರಣವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಅಕ್ಷತಾ ಹನಿಟ್ರ್ಯಾಪ್ ಮೂಲಕ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ಜಾಲದ ಕುರಿತು ಗೋವಾ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಇನ್ನಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.








