Thursday, July 16, 2026
spot_imgspot_img
spot_imgspot_img

ಬಂಟ್ವಾಳದಲ್ಲಿ ನಡೆದ ಯುವತಿ ಲಾವಣ್ಯ ಹತ್ಯೆ ಪ್ರಕರಣ-ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಲೇಬೇಕು : ಎಸ್‌ಡಿಪಿಐ

- Advertisement -
- Advertisement -

ಬಂಟ್ವಾಳ : ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಯುವತಿ ಲಾವಣ್ಯ ಅವರ ಮೇಲೆ ನಡೆದ ಅಮಾನುಷ ಹಲ್ಲೆ ಹಾಗೂ ಹತ್ಯೆ ಘಟನೆ ಅತ್ಯಂತ ಖಂಡನೀಯ ಮತ್ತು ನೋವಿನ ಸಂಗತಿಯಾಗಿದೆ. ಸಾರ್ವಜನಿಕ ಸ್ಥಳದಲ್ಲೇ ಒಬ್ಬ ಯುವತಿಯ ಜೀವವನ್ನು ಬಲಿ ಪಡೆದಿರುವ ಈ ಘಟನೆ ಸಮಾಜದ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಎಸ್‌ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ಕಾರ್ಯದರ್ಶಿಯಾದ ಅಕ್ಬರ್ ಅಲಿ ಪೊನ್ನೋಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.ಮೃತ ಲಾವಣ್ಯ ಅವರ ಕುಟುಂಬಕ್ಕೆ ನಮ್ಮ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಈ ದುರ್ಘಟನೆಯಿಂದ ಕುಟುಂಬಕ್ಕೆ ಉಂಟಾಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ.ಇದೇ ತಿಂಗಳಲ್ಲಿ ಮಂಚಿ-ಕುಕ್ಕಾಜೆ ಸಮೀಪದ ಮೊಂತಿಮಾರ್‌ನಲ್ಲಿ ಕಾಲೇಜಿಗೆ ತೆರಳಲು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ಯುವತಿಯ ಮೇಲೆ ನಡೆದ ಚಾಕು ದಾಳಿ ಹಾಗೂ ಅದರ ಬೆನ್ನಲ್ಲೇ ಬಂಟ್ವಾಳ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಯುವತಿ ಲಾವಣ್ಯ ಅವರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಮತ್ತು ಹತ್ಯೆ ಘಟನೆಗಳು ಅತ್ಯಂತ ಖಂಡನೀಯ ಮತ್ತು ಆತಂಕಕಾರಿ ಬೆಳವಣಿಗೆಗಳಾಗಿವೆ.ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಮತ್ತು ಯುವತಿಯರು ಸುರಕ್ಷಿತವಾಗಿ ಸಂಚರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಕೆಲವೇ ದಿನಗಳ ಅಂತರದಲ್ಲಿ ನಡೆದ ಈ ಎರಡು ಘಟನೆಗಳು ಕಾನೂನು ಸುವ್ಯವಸ್ಥೆ ಹಾಗೂ ಮಹಿಳಾ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.ಪೊಲೀಸ್ ಇಲಾಖೆ ಈ ಪ್ರಕರಣಗಳ ತನಿಖೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಆರೋಪಿಗಳನ್ನು ಬಂಧಿಸಿ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಮಹಿಳೆಯರ ವಿರುದ್ಧದ ಅಪರಾಧಗಳನ್ನು ತಡೆಯಲು ಬಸ್ ನಿಲ್ದಾಣಗಳು, ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಭದ್ರತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸುವುದು ಅಗತ್ಯವಾಗಿದೆ.ಮಹಿಳೆಯರ ಸುರಕ್ಷತೆ ಕೇವಲ ಒಂದು ಇಲಾಖೆಯ ಜವಾಬ್ದಾರಿಯಲ್ಲ; ಅದು ಸಮಾಜ ಮತ್ತು ಆಡಳಿತದ ಸಮಗ್ರ ಹೊಣೆಗಾರಿಕೆಯಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.

- Advertisement -

Related news

error: Content is protected !!