


ಬೆಂಗಳೂರು: ಸಿಗರೇಟ್ ಸೇದೋಕೆ ಜಾಗ ಕೊಡಿ, ನಿಮ್ಮ ಮೊಬೈಲ್ ನಂಬರ್ ಕೊಡಿ ಎಂದು ಒತ್ತಾಯಿಸಿ ಡೆಲಿವರಿ ಬಾಯ್ ಕಿರುಕುಳ ನೀಡಿದ ಘಟನೆ ಬೆಂಗಳೂರಿನ ಅಪಾರ್ಟ್ಮೆಂಟ್‌ನಲ್ಲಿ ನಡೆದಿದೆ.
ಆನೇರಿ ಠಕ್ಕರ್ ಎಂಬ ಯುವತಿ ಡೆಲಿವರಿ ಬಾಯ್ ಕಿರುಕುಳ ನೀಡಿರುವ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನಡೆದ ಘಟನೆ ಬಗ್ಗೆ ವಿವರಿಸಿದ್ದಾರೆ.
ಸ್ನೇಹಿತೆಗೆ ಜ್ಯಾಕೆಟ್ ಕಳುಹಿಸಲು ಯುವತಿ ಪಾರ್ಸಲ್ ಬುಕ್ ಮಾಡಿದ್ದರು. ಈ ವೇಳೆ ಪಾರ್ಸಲ್ ಸ್ವೀಕರಿಸಲು ಬಂದಿದ್ದ ಡೆಲಿವರಿ ಏಜೆಂಟ್ ಮದ್ಯದ ಅಮಲಿನಲ್ಲಿದ್ದ. ಪಾರ್ಸಲ್ ತಲುಪಿಸಿದ ಬಳಿಕವೂ ಅಲ್ಲಿಂದ ಹೋಗದೇ ಸತಾಯಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಮೊಬೈಲ್ ಚಾರ್ಜ್ಗೆ ಹಾಕಲು ಹಾಗೂ ಬಾಲ್ಕನಿಯಲ್ಲಿ ಸಿಗರೇಟ್ ಸೇದಲು ಅನುಮತಿ ಕೇಳುವ ನೆಪದಲ್ಲಿ ಫ್ಲ್ಯಾಟ್‌ಗೆ ನುಗ್ಗಲು ಆಸಾಮಿ ಯತ್ನಿಸಿದ್ದಾನೆ. ಮೊದಲು ನಾನು ಕೆಳಗೆ ಹೋಗಿ ಸಿಗರೇಟ್ ಸೇದಿಕೊಂಡು ಬರುತ್ತೇನೆ. ಅಲ್ಲಿವರೆಗೂ ನನ್ನ ಫೋನ್ ಚಾರ್ಜ್ ಹಾಕಿ ಎಂದು ಹೇಳಿದ್ದ. ಬಳಿಕ ನಿಮ್ಮ ಮನೆಯ ಬಾಲ್ಕನಿಯಲ್ಲಿ ಜಾಗ ಕೊಡಿ, ಅಲ್ಲೇ 2 ನಿಮಿಷ ಸಿಗರೇಟ್ ಸೇದುತ್ತೇನೆ ಎಂದಿದ್ದಾನೆ. ಅದಕ್ಕೆ ನಾನು ಅಲ್ಲಿ ನನ್ನ ಗೆಳತಿ ಮಲಗಿದ್ದಾಳೆ ಆಗಲ್ಲ ಎಂದೆ.
ತಕ್ಷಣವೇ ಅಪಾಯವನ್ನು ಅರಿತ ಯುವತಿ ಅಪಾರ್ಟ್ಮೆಂಟ್ ಸೆಕ್ಯುರಿಟಿಗೆ ಕರೆ ಮಾಡಿದ್ದಾರೆ. ಸೆಕ್ಯೂರಿಟಿ ಗಾರ್ಡ್ ಬಂದ ನಂತರವೂ ಆ ಡೆಲಿವರಿ ಬಾಯ್ ಯುವತಿಯ ಮೊಬೈಲ್ ಸಂಖ್ಯೆಯನ್ನು ನೀಡುವಂತೆ ಒತ್ತಾಯಿಸಿದ್ದಾನೆ. ತನಗಾದ ಈ ಕರಾಳ ಅನುಭವವನ್ನು ಯುವತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಒಂಟಿ ಮಹಿಳೆಯರ ಸುರಕ್ಷತೆಯ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.








