


ಬೆಂಗಳೂರು: ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಹೊಂದಿರುವ ಗ್ರಾಹಕರಿಗೆ ತೈಲ ಕಂಪನಿಗಳು ಮಹತ್ವದ ಸೂಚನೆ ನೀಡಿದ್ದು, ಆಗಸ್ಟ್ 16ರ ಒಳಗೆ E-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ ಸಿಲಿಂಡರ್ ಪೂರೈಕೆಯಲ್ಲಿ ಸಮಸ್ಯೆಯಾಗುವ ಜೊತೆಗೆ ಸಬ್ಸಿಡಿ ಸೌಲಭ್ಯವೂ ರದ್ದಾಗುವ ಸಾಧ್ಯತೆ ಇದೆ.
ಗ್ರಾಹಕರ ಮಾಹಿತಿ ಪರಿಶೀಲನೆ, ದಾಖಲೆಗಳ ಅಪ್‌ಡೇಟ್ ಮತ್ತು ನಿಜವಾದ ಫಲಾನುಭವಿಗಳ ಗುರುತಿಸುವಿಕೆಗೆ E-KYC ಕಡ್ಡಾಯಗೊಳಿಸಲಾಗಿದೆ. ಈ ಹಿಂದೆ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಡೆಡ್‌ಲೈನ್ ನೀಡಿದ್ದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಇದೀಗ ಆಗಸ್ಟ್ 16ರವರೆಗೆ ಗಡುವನ್ನು ವಿಸ್ತರಿಸಿದೆ.
ಆಗಸ್ಟ್ 16ರ ಬಳಿಕವೂ E-KYC ಮಾಡಿಸದಿದ್ದರೆ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ನಿರ್ಬಂಧಿಸುವ ಅಥವಾ ಸಿಲಿಂಡರ್ ಪೂರೈಕೆಯಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದೆ ಎಂದು ಗ್ಯಾಸ್ ವಿತರಕರು ತಿಳಿಸಿದ್ದಾರೆ.
ಸಬ್ಸಿಡಿ ದರದಲ್ಲಿ ದೊರೆಯುತ್ತಿರುವ ಗೃಹ ಬಳಕೆಯ ಸಿಲಿಂಡರ್‌ನ ಬೆಲೆ ಸುಮಾರು 945 ರೂ. ಇದೆ. ಆದರೆ E-KYC ಮಾಡಿಸದ ಗ್ರಾಹಕರು ಸಬ್ಸಿಡಿ ಸೌಲಭ್ಯ ಕಳೆದುಕೊಂಡರೆ, ಅದೇ ಸಿಲಿಂಡರ್‌ಗೆ ಮಾರುಕಟ್ಟೆ ದರದಂತೆ ಸುಮಾರು 2,108 ರೂ. ಪಾವತಿಸಬೇಕಾಗಬಹುದು ಎಂದು ವಿತರಕರು ತಿಳಿಸಿದ್ದಾರೆ.
ಹೀಗಾಗಿ ಗ್ರಾಹಕರು ಆಗಸ್ಟ್ 16ರೊಳಗೆ ತಮ್ಮ ಸಮೀಪದ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ E-KYC ಮಾಡಿಸಿಕೊಳ್ಳಬಹುದು. ಇಲ್ಲವೇ ಲಭ್ಯವಿರುವ ಅಧಿಕೃತ ಆನ್‌ಲೈನ್ ಅಥವಾ ಮೊಬೈಲ್ ಸೇವೆಯ ಮೂಲಕವೂ E-KYC ಪೂರ್ಣಗೊಳಿಸಿಕೊಳ್ಳಬಹುದು ಎಂಬುದಾಗಿ ತಿಳಿದುಬಂದಿದೆ.








