


ಬಂಟ್ವಾಳ: ಅಪಾಯದ ಕ್ಷಣದಲ್ಲಿ ಗಾಬರಿಗೊಳ್ಳದೆ ಸಮಯಪ್ರಜ್ಞೆ ಮೆರೆದ 5ನೇ ತರಗತಿ ವಿದ್ಯಾರ್ಥಿಯೊಬ್ಬನ ಚುರುಕು ನಿರ್ಧಾರದಿಂದ ತಾಲೂಕಿನ ನರಿಕೊಂಬು ಸರ್ಕಾರಿ ಶಾಲೆಯಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದೆ.
ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ಕೆಲಸ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಸಿಬ್ಬಂದಿಯೊಬ್ಬರ ಬೆರಳು ಆಕಸ್ಮಿಕವಾಗಿ ವಿದ್ಯುತ್ ಚಾಲಿತ ತುರಿಯುವ ಯಂತ್ರಕ್ಕೆ ಸಿಲುಕಿಕೊಂಡಿದ್ದು, ನೋವಿನಿಂದ ಅವರು ಕಿರುಚಿಕೊಂಡಿದ್ದಾರೆ.
ಆ ಶಬ್ದವನ್ನು ಕೇಳಿದ ಶಾಲಾ ಆವರಣದಲ್ಲಿ ಆಟವಾಡುತ್ತಿದ್ದ 5ನೇ ತರಗತಿ ವಿದ್ಯಾರ್ಥಿ ಮನ್ವಿತ್ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾನೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಬಾಲಕ, ಕೂಡಲೇ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿದ್ದಾನೆ. ಇದರಿಂದ ಸಿಬ್ಬಂದಿಗೆ ಮತ್ತಷ್ಟು ಅಪಾಯವಾಗುವುದನ್ನು ತಪ್ಪಿಸಲು ಸಾಧ್ಯವಾಗಿದೆ.
ಮನ್ವಿತ್ನ ಸಮಯಪ್ರಜ್ಞೆ ಹಾಗೂ ಧೈರ್ಯವನ್ನು ಶಾಲೆಯ ಶಿಕ್ಷಕ ವೃಂದ, ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ಹಾಗೂ ಸದಸ್ಯರು ಶ್ಲಾಘಿಸಿದ್ದಾರೆ. ಮನ್ವಿತ್ನ ಸಮಯಪ್ರಜ್ಞೆ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.








