


ವಿಟ್ಲ: ಬಂಟ್ವಾಳ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಮತ್ತು ವಿಟ್ಲ ಮಹಿಳಾ ಮಂಡಲದ ವತಿಯಿಂದ “ಆಟಿಡೊಂಜಿ ದಿನ” ಕಾರ್ಯಕ್ರಮವು ವಿಟ್ಲ ಮಹಿಳಾ ಮಂಡಲದ ಸಭಾ ಭವನದಲ್ಲಿ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಸರಸ್ವತಿ ಅವರು ಉದ್ಘಾಟಿಸಿದರು. ಮಹಿಳಾ ಮಂಡಲದ ಅಧ್ಯಕ್ಷೆ ಧರ್ಮಾವತಿ ಪಿ.ಬಿ ಅವರು ಅಧ್ಯಕ್ಷತೆ ವಹಿಸಿದ್ದರು.
ವಿಟ್ಲ ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಶಾರದಾ.ಕೆ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಆರೋಗ್ಯದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಸಂಘದ ಸದಸ್ಯೆಯರು 48 ಬಗೆಯ ಸಾಂಪ್ರದಾಯಿಕ ತಿನಿಸುಗಳನ್ನು ತಯಾರಿಸಿ ಪ್ರದರ್ಶಿಸಿದರು. ಅತಿ ಹೆಚ್ಚು ತಿನಿಸು ತಯಾರಿಸಿದ ಶುಭಾಂಗಿ ಶಿಂದೇ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿಟ್ಲ ಸಮುದಾಯ ಆಸ್ಪತ್ರೆಯ ಸಿಬ್ಬಂದಿಗಳು, ಮಹಿಳಾ ಮಂಡಲದ ಗೌರವ ಅಧ್ಯಕ್ಷೆ ಹೇಮಲತಾ ಜೆ. ಸಾಲಿಯಾನ್ ಹಾಗೂ ಸದಸ್ಯೆಯರು ಭಾಗವಹಿಸಿದ್ದರು.
ಮಾಲತಿ ಅವರು ಸ್ವಾಗತಿಸಿ, ಯಶೋಧಾ ಸೇರಾಜೆ ಪ್ರಾರ್ಥಿಸಿದರು, ವಿಮಲಾ ಪಿ. ಶೆಟ್ಟಿ ವಂದಿಸಿ, ರಶ್ಮಿ ಹರೀಶ್ ಕಾರ್ಯಕ್ರಮ ನಿರೂಪಿಸಿದರು.







