
ಪಾಟ್ನಾ: ಅರ್ಹ ಮತದಾರರಿಗೆ ಮತದಾರರ ಗುರುತಿನ ಚೀಟಿ ದೊರೆಯುವಂತೆ ಕಾರ್ಯನಿರ್ವಹಿಸುವ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್ಒಗಳು) ಪ್ರಜಾಪ್ರಭುತ್ವದ ಅಡಿಪಾಯ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹೇಳಿದ್ದಾರೆ.
ಬಿಹಾರದ ನಳಂದಾ ಜಿಲ್ಲೆಯಲ್ಲಿ ಬಿಎಲ್ಒಗಳ ಸಭೆಯ ಬಳಿಕ ಮಾತನಾಡಿದ ಅವರು, “ಬಿಎಲ್ಒಗಳು ಪ್ರಜಾಪ್ರಭುತ್ವದ ಅಡಿಪಾಯ.ಅವರು ಪ್ರತಿಯೊಬ್ಬ ಮತದಾರರ ಮನೆಗೆ ತೆರಳಿ, ಅತ್ಯಂತ ಪಾರದರ್ಶಕವಾಗಿ ಅರ್ಹ ಮತದಾರರ ಗುರುತಿನ ಚೀಟಿಗಳನ್ನು ಸಿದ್ಧಪಡಿಸುವುದನ್ನು ಖಚಿತಪಡಿಸುತ್ತಾರೆ” ಎಂದು ಹೇಳಿದರು.ನಳಂದಾ ಜಿಲ್ಲೆಯ ಬಿಎಲ್ಒಗಳ ಕಾರ್ಯವನ್ನು ವಿಶೇಷವಾಗಿ ಶ್ಲಾಘಿಸಿದ ಅವರು, ಅವರ ಸಾಮರ್ಥ್ಯ ದೇಶದಾದ್ಯಂತದ ಎಲ್ಲ ಬಿಎಲ್ಒಗಳಲ್ಲೂ ಇರಬೇಕು ಎಂದು ಹೇಳಿದರು.
ELC 2.0 ರಚನೆ
ಚುನಾವಣಾ ಪ್ರಕ್ರಿಯೆ ಹಾಗೂ ಅದರ ಪಾರದರ್ಶಕತೆಯ ಕುರಿತು ಜನರಲ್ಲಿ ಅರಿವು ಮೂಡಿಸಲು ಚುನಾವಣಾ ಸಾಕ್ಷರತಾ ಕ್ಲಬ್ಬಳನ್ನು (ELC) ಸ್ಥಾಪಿಸುವ ಪ್ರಕ್ರಿಯೆಯನ್ನು ಬಿಹಾರದಿಂದ ಆರಂಭಿಸಲಾಗಿದ್ದು, ಇದನ್ನು ದೇಶಾದ್ಯಂತ ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಲಾಗುವುದು ಎಂದು ಜ್ಞಾನೇಶ್ ಕುಮಾರ್ ತಿಳಿಸಿದರು.
ವಿಶ್ವವಿದ್ಯಾಲಯಗಳ ಕುಲಪತಿಗಳು, ಶಾಲಾ-ಕಾಲೇಜುಗಳ ಪ್ರಾಂಶುಪಾಲರು ಹಾಗೂ ಬಿಹಾರದಾದ್ಯಂತದ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದ ಸಮಾವೇಶದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಹಲವು ಉತ್ತಮ ಸಲಹೆಗಳು ಬಂದಿವೆ ಎಂದು ಅವರು ಹೇಳಿದರು.”ಬಿಹಾರ ಹೇಗೆ ಇಡೀ ದೇಶಕ್ಕೆ ಪಾರದರ್ಶಕ ಮತ್ತು ಶಾಂತಿಯುತ ಮತದಾನವನ್ನು ಕೊಡುಗೆಯಾಗಿ ನೀಡಿತೋ, ಅದೇ ರೀತಿ ಚುನಾವಣಾ ಸಾಕ್ಷರತಾ ಕ್ಲಬ್ಬಳನ್ನೂ (ELC) ರಾಷ್ಟ್ರಕ್ಕೆ ಒಂದು ವರದಾನವಾಗಿ ನೀಡಲಿದೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.








