


ತಿರುವನಂತಪುರಂ: ಕೇರಳದ ಅಲಪ್ಪುಳದಲ್ಲಿ ನಡೆದ 67 ವರ್ಷದ ವ್ಯಕ್ತಿಯ ಕೊಲೆ ಪ್ರಕರಣ ಬೆಚ್ಚಿಬೀಳಿಸುವ ತಿರುವು ಪಡೆದುಕೊಂಡಿದೆ. ಸ್ವಂತ ಮೊಮ್ಮಗಳೇ ಅಜ್ಜನ ಕೊಲೆಗೆ ಸಂಚು ರೂಪಿಸಿದ್ದಾಳೆ. ಅಷ್ಟೇ ಅಲ್ಲ, ಮನೆಗೆ ಬಂದಿದ್ದ ಹದಿಹರೆಯದವರ ಮೂಲಕ ಕೊಲೆ ಮಾಡಿಸಿ, ಅದನ್ನು ವಿಡಿಯೋ ಕಾಲ್‌ನಲ್ಲಿ ನೋಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 15ರ ರಾತ್ರಿ ಈ ಘಟನೆ ನಡೆದಿದೆ. ಅಂದು 67 ವರ್ಷದ ವ್ಯಕ್ತಿ ಮನೆಯಲ್ಲಿ ಒಬ್ಬರೇ ಇದ್ದರು. ಅವರ ಕಿರಿಯ ಮಗಳನ್ನು ಹೆರಿಗೆಗಾಗಿ ಆಲಪ್ಪುಳದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪತ್ನಿ ಕೂಡ ಮಗಳ ಜೊತೆ ಆಸ್ಪತ್ರೆಯಲ್ಲಿದ್ದರು.
13 ವರ್ಷದ ಬಾಲಕಿ ತನ್ನ 17 ವರ್ಷದ ಸ್ನೇಹಿತ ಸೇರಿದಂತೆ ನಾಲ್ವರು ಹದಿಹರೆಯದವರನ್ನು ಅಜ್ಜನ ಮನೆಗೆ ಕಳುಹಿಸಿದ್ದಳು. ಬಾತ್‌ರೂಮ್‌ನ ವೆಂಟಿಲೇಟರ್ ಮೂಲಕ ಅವರು ಮನೆಯೊಳಗೆ ಪ್ರವೇಶಿಸಿದ್ದರು. ಆ ಸಮಯದಲ್ಲಿ ಬಾಲಕಿ ಅವರ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಾ ಮನೆಯ ದಾರಿ ಮತ್ತು ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಳು.
ಮನೆಯೊಳಗೆ ಪ್ರವೇಶಿಸಿದ ಆರೋಪಿಗಳು ವೃದ್ಧನ ಕೈಕಾಲುಗಳನ್ನು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಬಳಿಕ ಹಲ್ಲೆ ನಡೆಸಿ, ಬಟ್ಟೆಯಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲೂ ಉಸಿರುಗಟ್ಟುವಿಕೆಯೇ ಸಾವಿಗೆ ಕಾರಣ ಎಂದು ತಿಳಿದುಬಂದಿದ್ದು, ದೇಹದ ಮೇಲೆ ಗಾಯಗಳಾಗಿರುವುದು ಪತ್ತೆಯಾಗಿದೆ.
ಕೊಲೆ ಬಳಿಕ ಮನೆಯಿಂದ ಸುಮಾರು 36 ಗ್ರಾಂ ಚಿನ್ನ ಕಳವು ಮಾಡಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಪೊಲೀಸರು ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಹಣದ ವಿಚಾರವೂ ಈ ಕೃತ್ಯದ ಹಿಂದೆ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಬಾಲಕಿಗೆ ಮೊಬೈಲ್ ಫೋನ್ ಬೇಕಿತ್ತು. ಆಕೆಯ ಸ್ನೇಹಿತನಿಗೆ ಬೈಕ್ ಖರೀದಿಸಲು ಹಣ ಬೇಕಿತ್ತು ಎನ್ನಲಾಗಿದೆ. ಆರೋಪಿಗಳು ಮಾದಕ ವಸ್ತುಗಳನ್ನು ಬಳಸುತ್ತಿದ್ದರೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಅಜ್ಜ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದರಿಂದ ಆತನ ಮೇಲೆ ದ್ವೇಷವಿತ್ತು ಎಂಬ ಬಾಲಕಿಯ ಹೇಳಿಕೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಕೊಲೆ ನಡೆದರೂ ಬಾಲಕಿಯ ವರ್ತನೆಯಲ್ಲಿ ಬದಲಾವಣೆ ಇರಲಿಲ್ಲ.
ಕೊಲೆಯ ಮರುದಿನವೂ ಬಾಲಕಿಯ ವರ್ತನೆಯಲ್ಲಿ ಯಾವುದೇ ಅನುಮಾನಾಸ್ಪದ ಬದಲಾವಣೆ ಕಾಣಿಸಲಿಲ್ಲ ಎಂದು ನೆರೆಹೊರೆಯವರು ಹೇಳಿದ್ದಾರೆ. ಆಗಸ್ಟ್ 16ರಂದು ಆಕೆ ಮಕ್ಕಳೊಂದಿಗೆ ಹತ್ತಿರದ ಅಂಗಡಿಗೆ ತೆರಳಿ ಎರಡು ಬಾರಿ ಚಿಪ್ಸ್ ಖರೀದಿಸಿದ್ದಾಳೆ. ಮರುದಿನ ಬೆಳಗ್ಗೆ ಅಜ್ಜ ಬಾಗಿಲು ತೆರೆಯುತ್ತಿಲ್ಲ ಎಂದು ಸ್ಥಳೀಯರಿಗೆ ತಿಳಿಸಿದ್ದಾಳೆ.
ಅಜ್ಜ ಕುಡಿದು ಮಲಗಿರಬಹುದು ಎಂದು ಆಕೆ ಹೇಳಿದ್ದಾಳೆ ಎಂದು ಅಂಗಡಿಯವರು ಪೊಲೀಸರಿಗೆ ತಿಳಿಸಿದ್ದಾರೆ. ಕೊನೆಗೆ ಮನೆ ತೆರೆದಾಗ 67 ವರ್ಷದ ವ್ಯಕ್ತಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಅಷ್ಟಾದರೂ ಬಾಲಕಿ ಶಾಲೆಗೆ ಹೋಗಲು ಸಿದ್ಧಳಾಗಿದ್ದಳು ಎನ್ನಲಾಗಿದೆ. ಸಮವಸ್ತ್ರ ಬದಲಿಸಿಕೊಂಡು, ಪರೀಕ್ಷೆ ಇದೆ ಎಂದು ಹೇಳಿ ಹೊರಡಲು ಮುಂದಾಗಿದ್ದಳು.
ಅಜ್ಜನ ಮೃತದೇಹ ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿದ್ದ ಅದೇ ಸಮಯದಲ್ಲಿ ಅವರ ಕಿರಿಯ ಮಗಳು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗಳ ಹೆರಿಗೆಯ ವೇಳೆ ಆಸ್ಪತ್ರೆಯಲ್ಲಿದ್ದ ಪತ್ನಿಗೆ ಬಳಿಕ ಪತಿಯ ಸಾವಿನ ಸುದ್ದಿ ತಿಳಿದಿದೆ. ನಂತರ ಅವರು ಹೆರಿಗೆ ವಾರ್ಡ್ನಿಂದ ಶವಾಗಾರಕ್ಕೆ ತೆರಳಿ ಪತಿಯ ಮೃತದೇಹವನ್ನು ನೋಡಬೇಕಾದ ಪರಿಸ್ಥಿತಿ ಎದುರಾಗಿದೆ.
ಪ್ರಕರಣದಲ್ಲಿ ಆರೋಪಿಗಳೆಲ್ಲರೂ ಹದಿಹರೆಯದವರಾಗಿರುವುದರಿಂದ ಮುಂದಿನ ಕಾನೂನು ಪ್ರಕ್ರಿಯೆ ಕೂಡ ಮಹತ್ವ ಪಡೆದಿದೆ. 16ರಿಂದ 18 ವರ್ಷದ ಆರೋಪಿಗಳನ್ನು ವಯಸ್ಕರಂತೆ ವಿಚಾರಣೆ ನಡೆಸಲು ಪ್ರಯತ್ನಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಆದರೆ ಇದಕ್ಕಾಗಿ ಬಾಲ ನ್ಯಾಯ ಮಂಡಳಿಯು ಪ್ರಾಥಮಿಕ ಮೌಲ್ಯಮಾಪನ ನಡೆಸಬೇಕು. ಸದ್ಯ ಆರೋಪಿಗಳನ್ನು ವೀಕ್ಷಣಾ ಗೃಹಕ್ಕೆ ಕಳುಹಿಸಲಾಗಿದೆ. ಪ್ರಕರಣದ ಸಂಪೂರ್ಣ ಹಿನ್ನೆಲೆ, ಕೊಲೆಯ ಉದ್ದೇಶ ಮತ್ತು ಹಣದ ವ್ಯವಹಾರದ ಬಗ್ಗೆ ತನಿಖೆ ಮುಂದುವರಿದಿದೆ.








