
ಬೆಳ್ತಂಗಡಿ: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ವೇಣೂರು ಪೊಲೀಸರು ರಿಕ್ಷಾ ಚಾಲಕನೊಬ್ಬನನ್ನು ಬಂಧಿಸಿದ್ದಾರೆ.
ವೇಣೂರು ನಿವಾಸಿ ಜಮಾಲುದ್ದೀನ್ ಎಂಬಾತ ಕೆಲವು ತಿಂಗಳುಗಳಿಂದ 14 ವರ್ಷದ ಬಾಲಕಿಯನ್ನು ತನ್ನ ರಿಕ್ಷಾದಲ್ಲಿ ಶಾಲೆಗೆ ಕರೆದೊಯ್ದು, ಮನೆಗೆ ಕರೆತರುತ್ತಿದ್ದ ಎನ್ನಲಾಗಿದೆ. ಈ ವೇಳೆ ಬಾಲಕಿಯೊಂದಿಗೆ ಆರೋಪಿ ಅನುಚಿತವಾಗಿ ವರ್ತಿಸುತ್ತಿದ್ದ. ಇದಕ್ಕೆ ಬಾಲಕಿ ಪ್ರತಿರೋಧ ವ್ಯಕ್ತಪಡಿಸಿದಾಗ ಆರೋಪಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬೆದರಿಕೆಯಿಂದ ಹೆದರಿದ ಬಾಲಕಿ ಈ ವಿಚಾರವನ್ನು ಯಾರಿಗೂ ತಿಳಿಸಿರಲಿಲ್ಲ ಎನ್ನಲಾಗಿದೆ. ಆಗಸ್ಟ್ 13ರಂದು ಸಂಜೆ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಆರೋಪಿ ಆಕೆಯನ್ನು ಬೆದರಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಕುರಿತು ಬಾಲಕಿ ಆಗಸ್ಟ್ 15ರಂದು ನೀಡಿದ ದೂರಿನ ಮೇರೆಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ BNSನ ವಿವಿಧ ಕಲಂಗಳ ಜತೆಗೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿಯನ್ನು ಆಗಸ್ಟ್ 15ರಂದು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.







