



ಲಕ್ನೋ: ತರಬೇತಿ ವಿಮಾನವೊಂದು ಪತನಗೊಂಡ ಪರಿಣಾಮ ಕರ್ನಾಟಕದ ಪೈಲಟ್ ಸೇರಿ ಇಬ್ಬರು ಪೈಲಟ್‌ಗಳು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಗುರುವಾರ ನಡೆದಿದೆ.
ಗಂಗಾ ನದಿ ತೀರದ ಸಮೀಪದ ಹೊಲವೊಂದರಲ್ಲಿ ದುರಂತ ಸಂಭವಿಸಿದೆ. ಕಾನ್ಪುರದ ಗಾರ್ಗ್ ಏವಿಯೇಷನ್ ತರಬೇತಿ ಕೇಂದ್ರದಿಂದ ಬೆಳಗ್ಗೆ 11:30ಕ್ಕೆ ಟ್ವಿನ್ ಎಂಜಿನ್ ಹೊಂದಿರುವ ನಾಲ್ಕು ಆಸನಗಳ ತರಬೇತಿ ವಿಮಾನ ಟೇಕ್‌ಆಫ್ ಆಗಿತ್ತು. ತರಬೇತಿ ಕೇಂದ್ರಕ್ಕೆ ಹಿಂದಿರುಗುತ್ತಿದ್ದ ವೇಳೆ 11:50ರ ಸುಮಾರಿಗೆ ವಿಮಾನ ನಿಯಂತ್ರಣ ಕಳೆದುಕೊಂಡು ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನದಲ್ಲಿದ್ದ ಇಬ್ಬರಲ್ಲಿ ಒಬ್ಬರು ತರಬೇತಿ ಪಡೆಯುತ್ತಿದ್ದ ಪೈಲಟ್ ಹಾಗೂ ಮತ್ತೊಬ್ಬರು ತರಬೇತಿ ನೀಡುತ್ತಿದ್ದ ಇನ್‌ಸ್ಟ್ರಕ್ಟರ್ ಆಗಿದ್ದರು. ಮೃತರನ್ನು ಗುಜರಾತ್‌ನ ಸಚಿನ್ ಭಾಟಿಯಾ ಹಾಗೂ ಕರ್ನಾಟಕದ ಅಭಿಷೇಕ್ ಪೂಜಾರಿ ಎಂದು ಗುರುತಿಸಲಾಗಿದೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, ಇನ್‌ಸ್ಟ್ರಕ್ಟರ್‌ಗೆ ಸುಮಾರು 3,000 ಗಂಟೆಗಳ ಹಾರಾಟದ ಅನುಭವವಿತ್ತು. ಅಪಘಾತದ ಕುರಿತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಗೆ ಮಾಹಿತಿ ನೀಡಲಾಗಿದ್ದು, ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಿದೆ.
ಅಪಘಾತದ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ತುರ್ತು ಸೇವಾ ಸಿಬ್ಬಂದಿ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಅಪಘಾತದ ಸ್ಥಳದಲ್ಲಿ ವಿಮಾನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಲೋಹದ ಭಾಗಗಳು ಹಾಗೂ ರೆಕ್ಕೆಗಳು ಮುರಿದು ಚದುರಿದ ಸ್ಥಿತಿಯಲ್ಲಿ ಕಂಡುಬಂದಿವೆ. ವಿಮಾನ ಪತನಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ವಿಮಾನ ನಿಯಂತ್ರಣ ಕಳೆದುಕೊಂಡ ಬಳಿಕ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ತರಬೇತಿ ವಿಮಾನವನ್ನು 2023ರಲ್ಲಿ ತರಬೇತಿ ಕೇಂದ್ರಕ್ಕೆ ತರಲಾಗಿತ್ತು ಎನ್ನಲಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಬ್ಬರು ಪೈಲಟ್‌ಗಳ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ದುಃಖತಪ್ತ ಕುಟುಂಬಗಳಿಗೆ ಈ ನಷ್ಟವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.
ಅಪಘಾತದ ಕುರಿತು ವಿಮಾನ ಅಪಘಾತ ತನಿಖಾ ಮಂಡಳಿಗೆ ಮಾಹಿತಿ ನೀಡಲಾಗಿದೆ. ಅಪಘಾತಕ್ಕೆ ಕಾರಣವಾದ ಪರಿಸ್ಥಿತಿಗಳು ಮತ್ತು ನಿಖರ ಕಾರಣ ತನಿಖೆಯ ಬಳಿಕವಷ್ಟೇ ತಿಳಿದುಬರಲಿದೆ.








