


ಚೆನ್ನೈ: ಮಧುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ʻತಾಯ್ ಮಾಮನ್ ತಂಗ ಮೋದಿರಂʼ(ತಾಯಿಯ ಸಹೋದರನ ಚಿನ್ನದುಂಗುರ ಯೋಜನೆ) ಯೋಜನೆಗೆ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಚಾಲನೆ ನೀಡಿದರು. ಉದ್ಘಾಟನಾ ಸಮಾರಂಭದಲ್ಲಿ ಅವರು ನವಜಾತ ಶಿಶುವಿಗೆ 1 ಗ್ರಾಂ ಚಿನ್ನದ ಉಂಗುರ ತೊಡಿಸಿದರು.
ಆಸ್ಪತ್ರೆಯ ಹೆರಿಗೆ ವಾರ್ಡ್‌ಗೆ ಭೇಟಿ ನೀಡಿದ ಅವರು, ನವಜಾತ ಶಿಶುಗಳಿಗೆ ಆಶೀರ್ವದಿಸಿದ ಬಳಿಕ ಶಿಶುಗಳ ಪೋಷಕರಿಗೆ ಉಂಗುರಗಳನ್ನು ವಿತರಿಸಿದರು.
ಟಿವಿಕೆ ಪಕ್ಷ ಚುನಾವಣೆಗೂ ಮುನ್ನ ಅಧಿಕಾರಕ್ಕೆ ಬಂದರೆ ಈ ಯೋಜನೆ ಜಾರಿಗೊಳಿಸುವ ಬಗ್ಗೆ ಘೋಷಿಸಿತ್ತು. ಈ ಯೋಜನೆಯಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸಿದ ಶಿಶುಗಳಿಗೆ ಸರ್ಕಾರವು ಒಂದು ಗ್ರಾಂ, 22 ಕ್ಯಾರೆಟ್ ಚಿನ್ನದ ಉಂಗುರವನ್ನು ನೀಡುತ್ತದೆ. ಈ ಯೋಜನೆಗೆ ಅರ್ಹತೆ ಪಡೆಯಲು, ನವಜಾತ ಶಿಶುಗಳ ತಾಯಂದಿರು ತಮಿಳುನಾಡಿನ ಖಾಯಂ ನಿವಾಸಿಗಳಾಗಿರಬೇಕು.
ಈ ಯೋಜನೆಗಾಗಿ ರಾಜ್ಯ ಸರ್ಕಾರ ವಾರ್ಷಿಕ 755.83 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು, ಈಗಾಗಲೇ 1.28 ಲಕ್ಷ ಉಂಗುರಗಳನ್ನು ಸಿದ್ಧಪಡಿಸಿ ಇಡಲಾಗಿದೆ. ಈ ಉಂಗುರಗಳು ವಿಶಿಷ್ಟ ಸರಣಿ ಸಂಖ್ಯೆಗಳನ್ನು ಹೊಂದಿರುತ್ತವೆ ಹಾಗೂ ಟ್ಯಾಂಪರ್-ಪ್ರೂಫ್ ಪ್ಯಾಕೇಜಿಂಗ್‌ನಲ್ಲಿ ಈ ಉಂಗುರಗಳನ್ನು ವಿತರಿಸಲಾಗುತ್ತದೆ.
ಅಕ್ಟೋಬರ್ 6 ರಂದು ಉಪಚುನಾವಣೆ ನಡೆಯಲಿರುವ ಮಧುರಾಂತಕಂ ಮತ್ತು ಧಾರಾಪುರಂ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ ಪ್ರದೇಶಗಳನ್ನು ಹೊರತುಪಡಿಸಿ, ರಾಜ್ಯಾದ್ಯಂತ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.
ಅರ್ಹ ಫಲಾನುಭವಿಗಳು ನೋಂದಾಯಿಸಿಕೊಂಡಿರಬೇಕು. ಅಲ್ಲದೇ ಮಕ್ಕಳ ಆರೋಗ್ಯ ಕಾರ್ಡ್ ID ಹೊಂದಿರಬೇಕು. ಫಲಾನುಭವಿಗಳು ಆಸ್ಪತ್ರೆಗಳಿಂದ ಬಿಡುಗಡೆಯಾದಾಗ ಉಂಗುರಗಳನ್ನು ನೀಡಲಾಗುತ್ತದೆ.
ಉಂಗುರಗಳ ಪೂರೈಕೆ ಕೆಲಸವನ್ನು ಜೋಯಾಲುಕ್ಕಾಸ್ ಮತ್ತು ಕಲ್ಯಾಣ್ ಜ್ಯುವೆಲ್ಲರ್ಸ್‌ಗೆ ನೀಡಲಾಗಿದ್ದು, ಯೋಜನೆಯ ಅನುಷ್ಠಾನದ ಕುರಿತು ಜೂನ್ 23, 2026 ರಂದು ಸರ್ಕಾರಿ ಆದೇಶವನ್ನು ಪ್ರಕಟಿಸಲಾಗಿತ್ತು. ಸ್ಥಳೀಯ ಅನುಷ್ಠಾನ, ದಾಸ್ತಾನು, ವಿತರಣೆಯಲ್ಲಿ ಪಾರದರ್ಶಕತೆಯನ್ನು ಮೇಲ್ವಿಚಾರಣೆ ಮಾಡಲು ಆಯಾ ಜಿಲ್ಲಾಧಿಕಾರಿಗಳ ಅಡಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ವಿಶೇಷ ಮೇಲ್ವಿಚಾರಣಾ ಸಮಿತಿಯನ್ನು ರಚಿಸಲಾಗಿರುವುದಾಗಿ ತಿಳಿದುಬಂದಿದೆ.








