Saturday, October 3, 2026
spot_imgspot_img
spot_imgspot_img

ಕಸ್ಟಡಿ ತೀರ್ಪಿನ ಕೆಲವೇ ಗಂಟೆಗಳಲ್ಲಿ 4 ವರ್ಷದ ಮಗಳನ್ನು ಗುಂಡಿಕ್ಕಿ ಕೊಂದ ತಾಯಿ; ಬಳಿಕ ತಾನೂ ಆತ್ಮಹತ್ಯೆ

- Advertisement -
- Advertisement -

ಹೂಸ್ಟನ್: ಮಗಳ ಪಾಲನೆ ಹಕ್ಕು (ಕಸ್ಟಡಿ) ಮಾಜಿ ಪತಿಗೆ ನೀಡಿದ ನ್ಯಾಯಾಲಯದ ತೀರ್ಪು ಹೊರಬಂದ ಕೆಲವೇ ಗಂಟೆಗಳಲ್ಲಿ ಅಮೆರಿಕದ ಟೆಕ್ಸಾಸ್‌ನಲ್ಲಿ ತಾಯಿಯೊಬ್ಬರು ನಾಲ್ಕು ವರ್ಷದ ಮಗಳನ್ನು ಗುಂಡಿಕ್ಕಿ ಕೊಂದು, ಬಳಿಕ ತಾವೂ ಗುಂಡು ಹಾರಿಸಿಕೊಂಡು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.35 ವರ್ಷದ ಸಿಬೆಲ್ಲೆ ಸವೆಲ್ಲಾ ಅವರು ತಮ್ಮ ಮಗಳು ವಿವಿಯನ್‌ಳನ್ನು ಮಾಜಿ ಪತಿ ಆರನ್ ಸವೆಲ್ಲಾ ಅವರಿಗೆ ಒಪ್ಪಿಸಬೇಕಿತ್ತು. ಆದರೆ, ಮಂಗಳವಾರ ಸಂಜೆ ಹೂಸ್ಟನ್‌ನಲ್ಲಿರುವ ತಮ್ಮ ಮನೆಯಲ್ಲಿ ವಿವಿಯನ್‌ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ ಬಳಿಕ ತಾವೂ ಗುಂಡು ಹಾರಿಸಿಕೊಂಡಿದ್ದಾರೆ ಎಂದು ಹೂಸ್ಟನ್ ಪೊಲೀಸ್ ಇಲಾಖೆ ತಿಳಿಸಿದೆ.ಅಂದು ನಡೆದ ಕಸ್ಟಡಿ ವಿಚಾರಣೆಯಲ್ಲಿ ವಿವಿಯನ್‌ಳ ಆರೈಕೆ ಮತ್ತು ಪ್ರಮುಖ ನಿರ್ಧಾರಗಳ ಜವಾಬ್ದಾರಿಯನ್ನು ಆರನ್ ಅವರಿಗೆ ನೀಡಲಾಗಿತ್ತು. ತೀರ್ಪಿನ ಬಳಿಕ ಅದೇ ಸಂಜೆ ವಿವಿಯನ್ ತನ್ನ ತಂದೆಯ ಮನೆಗೆ ತೆರಳಬೇಕಿತ್ತು ಎಂದು ಆರನ್ ಕುಟುಂಬ ತಿಳಿಸಿದೆ.

ಮನೆಗೆ ತೆರಳಿದ ಪೊಲೀಸರಿಗೆ ಆಘಾತ

ಮಂಗಳವಾರ ಸಂಜೆ ಸುಮಾರು 5.45ಕ್ಕೆ ಸಿಬೆಲ್ಲೆ ಅವರ ಮನೆಗೆ ಪೊಲೀಸರು ತೆರಳಿದಾಗ ವಿವಿಯನ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಮನೆಯ ಮೂರನೇ ಮಹಡಿಯಲ್ಲಿ ಸಿಬೆಲ್ಲೆ ಗುಂಡೇಟಿನಿಂದ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಒಂದು ದಿನದ ಬಳಿಕ ಮೃತಪಟ್ಟಿದ್ದಾರೆ.ಘಟನೆಯ ಸಂದರ್ಭದಲ್ಲಿ ಸಿಬೆಲ್ಲೆ ಅವರ ಹೊಸ ಪತಿ ಗ್ರೆಗ್ ಕುಬಾಲಾ ಹಾಗೂ ಮಗುವನ್ನು ನೋಡಿಕೊಳ್ಳುತ್ತಿದ್ದ ಬೇಬಿಸಿಟ್ಟರ್ ಮನೆಯಲ್ಲಿದ್ದರು. ಅವರು ಗುಂಡಿನ ದಾಳಿಯಲ್ಲಿ ಭಾಗಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕಸ್ಟಡಿ ವಿಚಾರಣೆಯಲ್ಲಿ ತಾಯಿಗೆ ಹಿನ್ನಡೆ

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಹೂಸ್ಟನ್ ಪೊಲೀಸ್ ಲೆಫ್ಟಿನೆಂಟ್ ಲ್ಯಾರಿ ಕೌಸನ್, ಕಸ್ಟಡಿ ವಿಚಾರಣೆ ಅದೇ ದಿನ ನಡೆದಿದ್ದು, ತೀರ್ಪು ಸಿಬೆಲ್ಲೆ ಅವರಿಗೆ ಅನುಕೂಲಕರವಾಗಿರಲಿಲ್ಲ ಎಂದು ಹೇಳಿದ್ದಾರೆ. ಮಾಜಿ ಪತಿ ಆರನ್ ಅವರು ಮಗಳಿಗೆ ದೈಹಿಕ ದೌರ್ಜನ್ಯವಾಗುತ್ತಿದೆ ಎಂದು ಆರೋಪಿಸಿರಲಿಲ್ಲ.

ಆದರೆ, ಮಗಳಿಗೆ ಭಾವನಾತ್ಮಕ ದೌರ್ಜನ್ಯವಾಗುವ ಸಾಧ್ಯತೆಯಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದರು ಎಂದು ಅವರ ಪರ ವಕೀಲ ಸ್ಟೆಫಾನಿ ಶಾಪಿರೋ ತಿಳಿಸಿದ್ದಾರೆ.2024ರಲ್ಲಿ ವಿಚ್ಛೇದನ; ಬಳಿಕ ಕಾನೂನು ಹೋರಾಟಮೂಲತಃ ಬ್ರೆಜಿಲ್‌ನವರಾದ ಸಿಬೆಲ್ಲೆ, ನಾಲ್ಕು ವರ್ಷಗಳ ದಾಂಪತ್ಯ ಜೀವನದ ಬಳಿಕ 2024ರ ನವೆಂಬರ್‌ನಲ್ಲಿ ಆರನ್ ಅವರಿಂದ ವಿಚ್ಛೇದನ ಪಡೆದಿದ್ದರು. ಬಳಿಕ ಮಗಳ ಕಸ್ಟಡಿಗಾಗಿ ಇಬ್ಬರೂ ಕಾನೂನು ಹೋರಾಟ ನಡೆಸುತ್ತಿದ್ದರು.ನ್ಯಾಯಾಲಯದ ದಾಖಲೆಗಳ ಪ್ರಕಾರ, ವಿವಿಯನ್‌ಳ ಆರೈಕೆಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಆರನ್ ಅವರಿಗೆ ನೀಡಲಾಗಿತ್ತು. ಸಿಬೆಲ್ಲೆ ಅವರಿಗೆ ಮೇಲ್ವಿಚಾರಣೆಯಲ್ಲಷ್ಟೇ ಮಗಳೊಂದಿಗೆ ಸಮಯ ಕಳೆಯಲು ಅವಕಾಶ ನೀಡಲಾಗಿತ್ತು.

ವಿವಿಯನ್‌ಳ ಶಾಲಾ ಚಟುವಟಿಕೆಗಳು ಹಾಗೂ ವೈದ್ಯಕೀಯ ನಿರ್ಧಾರಗಳಲ್ಲಿಯೂ ಅವರ ಭಾಗವಹಿಸುವಿಕೆಗೆ ನಿರ್ಬಂಧ ವಿಧಿಸಲಾಗಿತ್ತು.ಘಟನೆಯ ಸಂಪೂರ್ಣ ಹಿನ್ನೆಲೆ ಮತ್ತು ಗುಂಡಿನ ದಾಳಿಗೆ ಕಾರಣವಾದ ಸನ್ನಿವೇಶಗಳ ಕುರಿತು ಹೂಸ್ಟನ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -

Related news

error: Content is protected !!