

ಮಂಗಳೂರು : ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ದವಾಗಿರುವ ಯಕ್ಷಗಾನ ರಂಗಸ್ಥಳದಲ್ಲಿ ಧಾರ್ಮಿಕ ಸೌಹಾರ್ದತೆ ಹಾಗೂ ಭಾವೈಕ್ಯತೆಯ ಸುಂದರ ಅಧ್ಯಾಯವೊಂದು ಅನಾವರಣಗೊಳ್ಳಲಿದೆ. ಯಕ್ಷಗಾನ ರಂಗ ಪ್ರವೇಶಿಸಿದ ಮೊದಲ ಮುಸ್ಲಿಂ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ‘ಆರ್ಷಿಯಾ ಖಾನ್’, ಇದೀಗ ‘ದೇವಿ ಮಹಾತ್ಮೆ’ ಪ್ರಸಂಗದಲ್ಲಿ ಸಾಕ್ಷಾತ್ ‘ಶ್ರೀದೇವಿ’ಯಾಗಿ ಪಾತ್ರ ನಿರ್ವಹಿಸಲಿದ್ದಾರೆ.
ಅಕ್ಟೋಬರ್ 20ರಂದು ಮಂಗಳೂರಿನ ಕದ್ರಿ ದೇವಸ್ಥಾನದ ಆವರಣದಲ್ಲಿ ನಡೆಯಲಿರುವ ಯಕ್ಷಗಾನ ಪ್ರದರ್ಶನದಲ್ಲಿ ಅವರು ಈ ಮಹತ್ವದ ಪಾತ್ರಧಾರಿಯಾಗಿ ಕಲಾಭಿಮಾನಿಗಳ ಮುಂದೆ ಬರಲಿದ್ದಾರೆ.
ಮಂಗಳೂರಿನ ಕದ್ರಿ ಮಂಜುನಾಥ ದೇವಾಲಯದ ರಾಜಾಂಗಣದಲ್ಲಿ ‘ಕದಳಿ ಕಲಾ ಕೇಂದ್ರ’ವು ದಸರಾ ಉತ್ಸವದ ಅಂಗವಾಗಿ ‘ಕದಳಿ ದಶಾಹ’ ಹೆಸರಿನ 14ನೇ ವರ್ಷದ 10 ದಿನಗಳ ಯಕ್ಷಗಾನ ಸಂಭ್ರಮವನ್ನು ಅಕ್ಟೋಬರ್ 11ರಿಂದ 20ರವರೆಗೆ ಆಯೋಜಿಸಿದೆ. ಈ ಸಾಂಸ್ಕೃತಿಕ ಹಬ್ಬದ ಕೊನೆಯ ದಿನವಾದ ಅಕ್ಟೋಬರ್ 20 ರಂದು ‘ಸಂಪೂರ್ಣ ಶ್ರೀ ದೇವಿ ಮಹಾತ್ಮೆ’ ಪ್ರಸಂಗ ಪ್ರದರ್ಶನಗೊಳ್ಳಲಿದ್ದು, ಇದರಲ್ಲಿ ಕಟೀಲು, ಪಾವಂಜೆ ಮೇಳ ಸೇರಿದಂತೆ ತೆಂಕುತಿಟ್ಟು ಯಕ್ಷಗಾನದ ಪ್ರಸಿದ್ಧ ಮೇಳಗಳ ಖ್ಯಾತ ಕಲಾವಿದರು ಭಾಗವಹಿಸಲಿದ್ದು, ಅವರೊಡನೆ ಆರ್ಷಿಯಾ ಖಾನ್ ಕೂಡ ರಂಗಸ್ಥಳದಲ್ಲಿ ಶ್ರೀದೇವಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
‘ತನು ವಿಟ್ಲ’ ಎಂದೇ ಕಲಾ ಲೋಕದಲ್ಲಿ ಜನಪ್ರಿಯರಾಗಿರುವ ವಿಟ್ಲ ಸಮೀಪದ ಮಾಡ ಮೂಲದ ಆರ್ಷಿಯಾ ಖಾನ್ ಕಳೆದ 12 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಪ್ರಸಿದ್ಧ ಗುರು ಕದ್ರಿ ರಮೇಶ್ ಭಟ್ ಅವರ ಬಳಿ ಯಕ್ಷಗಾನದ ತೆಂಕುತಿಟ್ಟು ಶೈಲಿಯಲ್ಲಿ ಕಟ್ಟುನಿಟ್ಟಿನ ತರಬೇತಿ ಪಡೆದಿರುವ ಆರ್ಷಿಯಾ, ಈ ಹಿಂದೆ ‘ದೇವಿ ಮಹಾತ್ಮೆ’ಯ ಮಹಿಷಾಸುರ ಸೇರಿದಂತೆ ಅನೇಕ ಪ್ರಮುಖ ಪಾತ್ರಗಳಿಗೆ ಜೀವ ತುಂಬಿ ಸೈ ಎನಿಸಿಕೊಂಡಿದ್ದಾರೆ.
ಪ್ರಥಮ ಬಾರಿಗೆ ಶ್ರೀದೇವಿಯ ಪರಮ ಪವಿತ್ರ ಪಾತ್ರ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ, ತಮ್ಮ ನಿಯಮಿತ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದು, ಸಾತ್ವಿಕ ಆಹಾರ ಪದ್ಧತಿಯೊಂದಿಗೆ ಕಟ್ಟುನಿಟ್ಟಿನ ವ್ರತಾಚರಣೆಯನ್ನು ಕಾಯ್ದುಕೊಂಡು ಪಾತ್ರಕ್ಕೆ ಶ್ರದ್ಧೆಯಿಂದ ಸಿದ್ದರಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.








