Friday, October 9, 2026
spot_imgspot_img
spot_imgspot_img

ಕ್ಯಾನ್ಸರ್‌ ರೋಗಿಗಳಿಗೆ ಸಿಹಿಸುದ್ದಿ; ಔಷಧಗಳ ದರ ಶೇ. 30ಕ್ಕೆ ಮಿತಿಗೊಳಿಸಿದ ಕೇಂದ್ರ

- Advertisement -
- Advertisement -

ಬೆಂಗಳೂರು: ಕ್ಯಾನ್ಸರ್ ಔಷಧಗಳ ಬೆಲೆ ಮತ್ತು ಔಷಧ ಕಂಪನಿಗಳ ಲಾಭಾಂಶದ ವಿಚಾರ ಮತ್ತೆ ಚರ್ಚೆಗೆ ಬಂದಿದ್ದು, ಔಷಧಗಳ ಉತ್ಪಾದನಾ ವೆಚ್ಚಕ್ಕೂ ಮಾರಾಟ ದರಕ್ಕೂ ದೊಡ್ಡ ವ್ಯತ್ಯಾಸವಿದೆ ಎಂದು ಕರ್ನಾಟಕ ಆರೋಗ್ಯ ಇಲಾಖೆ ವರದಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕ್ಯಾನ್ಸರ್ ಔಷಧಗಳ ಮೇಲಿನ ವ್ಯಾಪಾರ ಲಾಭಾಂಶವನ್ನು ಅಸಲು ದರದ ಗರಿಷ್ಠ ಶೇ. 30ಕ್ಕೆ ಮಿತಿಗೊಳಿಸಿದೆ.

ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಔಷಧಗಳ ಬೆಲೆಯಲ್ಲಿನ ವ್ಯತ್ಯಾಸದ ಬಗ್ಗೆ ಧ್ವನಿ ಎತ್ತಿದ್ದರು. ಕ್ಯಾನ್ಸರ್ ಔಷಧಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ಹಲವು ಉದಾಹರಣೆಗಳನ್ನು ನೀಡಿ, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದರು.

ಔಷಧಗಳ ಉತ್ಪಾದನಾ ವೆಚ್ಚ ಮತ್ತು ಮಾರಾಟ ದರದ ನಡುವಿನ ವ್ಯತ್ಯಾಸವನ್ನು ಖಾದರ್ ಬಹಿರಂಗಪಡಿಸಿ, 86 ರೂ. ಔಷಧವನ್ನು 4,528 ರೂ.ಗೆ, 160ರೂ. ಔಷಧವನ್ನು 7,110 ರೂ. ಹಾಗೂ 118 ರೂ. ಔಷಧವನ್ನು 4,416 ರೂ.ಗೆ ಮಾರಾಟ ಮಾಡಲಾಗುತ್ತಿದೆ ಎಂದು ಅವರು ಉಲ್ಲೇಖಿಸಿದ್ದರು.

ಕ್ಯಾನ್ಸರ್ ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳ ಮೇಲೆ 10ರಿಂದ 52 ಪಟ್ಟು ಹೆಚ್ಚಿನ ದರ ವಿಧಿಸಲಾಗುತ್ತಿದೆ ಎಂಬ ವಿಚಾರವನ್ನೂ ಪ್ರಸ್ತಾಪಿಸಿದ್ದರು. ಇಂತಹ ಬೆಲೆ ವ್ಯತ್ಯಾಸದಿಂದ ಕ್ಯಾನ್ಸರ್ ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಹೆಚ್ಚಿನ ಆರ್ಥಿಕ ಹೊರೆ ಬೀಳುತ್ತಿದೆ ಎಂಬ ಕಳವಳ ವ್ಯಕ್ತವಾಗಿತ್ತು.

ಔಷಧಗಳ ಬೆಲೆ ನಿಗದಿ ವಿಚಾರದಲ್ಲಿ ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಖಾದರ್, ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದರು. ಆಸ್ಪತ್ರೆಗಳಲ್ಲಿ ಔಷಧಗಳ ಖರೀದಿ ವೆಚ್ಚ ಮತ್ತು ಮಾರಾಟ ದರದ ವಿವರಗಳಲ್ಲಿ ಪಾರದರ್ಶಕತೆ ಇರಬೇಕು ಎಂದೂ ಆಗ್ರಹಿಸಿದ್ದರು.

ಕ್ಯಾನ್ಸರ್ ಔಷಧಗಳ ದುಬಾರಿ ಬೆಲೆ ವಿಚಾರ ನ್ಯಾಯಾಂಗದಲ್ಲೂ ಚರ್ಚೆಗೆ ಬಂದಿತ್ತು. ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಔಷಧಗಳ ಹೆಚ್ಚಿನ ಬೆಲೆ ಕುರಿತು ಕೇರಳ ಹೈಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. ಔಷಧಗಳ ದರ ಏರಿಕೆ ವಿಚಾರವಾಗಿ ಸುಪ್ರೀಂ ಕೋರ್ಟ್ ಕೂಡ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತ್ತು ಎಂದು ನೀಡಿರುವ ಮಾಹಿತಿಯಲ್ಲಿ ಉಲ್ಲೇಖಿಸಲಾಗಿದೆ.

ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರ ಹೆಚ್ಚು ಔಷಧಗಳ ಬೆಲೆ ನಿಯಂತ್ರಿಸುವಂತೆ ಅಧಿಕಾರ ನೀಡಬೇಕು ಎಂಬುದು ಖಾದರ್ ಅವರ ಪ್ರಮುಖ ಬೇಡಿಕೆಯಾಗಿತ್ತು. ಕೇಂದ್ರ ಸರ್ಕಾರ ಅಸಲು ವೆಚ್ಚದ ಮೇಲೆ ಗರಿಷ್ಠ ಶೇ. 30ರಷ್ಟು ಲಾಭಾಂಶಕ್ಕೆ ಮಿತಿ ವಿಧಿಸಿರುವ ಕ್ರಮ ಜಾರಿಗೆ ಬಂದರೆ, ಕ್ಯಾನ್ಸರ್ ಔಷಧಗಳ ಬೆಲೆ ನಿಯಂತ್ರಣಕ್ಕೆ ನೆರವಾಗುವ ನಿರೀಕ್ಷೆಯಿದೆ. ಇದರಿಂದ ರೋಗಿಗಳ ಚಿಕಿತ್ಸಾ ವೆಚ್ಚ ಕಡಿಮೆಯಾಗುತ್ತದೆಯೇ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ ಎಂಬುದಾಗಿ ತಿಳಿದುಬಂದಿದೆ.

- Advertisement -

Related news

error: Content is protected !!