

ಮಂಗಳೂರು, ಅ.9: ಆಸ್ತಿಗಾಗಿ ಪ್ರಿಯಕರನ ಜೊತೆಗೂಡಿ ತನ್ನ ತಂದೆಯನ್ನೇ ಕೊಲೆ ಮಾಡಿ ಹೂತು ಹಾಕಿದ ಘಟನೆಯೊಂದು ನಗರದಲ್ಲಿ ನಡೆದಿರುವ ಅನುಮಾನ ವ್ಯಕ್ತವಾಗಿದೆ.ಈ ಮಧ್ಯೆ ಉರ್ವ ಠಾಣೆಯ ಪೊಲೀಸರು ಹೂತಿದ್ದ ಮೃತದೇಹವನ್ನು ಇಂದು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಮುಂದಾಗಿದ್ದಾರೆ.

ನಗರದ ಕೊಟ್ಟಾರ ಫಸ್ಟ್ ಕ್ರಾಸ್ ನಿವಾಸಿಯಾಗಿದ್ದ ಉದ್ಯಮಿ ಆಲ್ಬರ್ಟ್ ರೇಗೋ ಅವರನ್ನು ಜುಲೈ 19ರಂದು ಪುತ್ರಿ ಮಾಯಾ ರೇಗೋ ಎಂಬಾಕೆ ತನ್ನ ಬಾಯ್ಫ್ರೆಂಡ್ ಜೊತೆ ಸೇರಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.ತಂದೆ ನಿಧನರಾದ ಬಗ್ಗೆ ಪುತ್ರಿ ಮಾಯಾ ರೇಗೋ ಯಾರಿಗೂ ತಿಳಿಸದೆ ದೇರೇಬೈಲ್ನ ಚರ್ಚ್ನ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಿದ್ದಳು.ಆ ಬಳಿಕ ಆಕೆಯ ವರ್ತನೆಯ ಬಗ್ಗೆ ಅನುಮಾನಗೊಂಡಿದ್ದ ಸ್ಥಳೀಯರು ಮತ್ತು ಕುಟುಂಬದ ಸದಸ್ಯರು ಪೊಲೀಸರಿಗೆ ಇತ್ತೀಚೆಗೆ ಮಾಹಿತಿ ನೀಡಿದ್ದರು. ಅದರಂತೆ ಸುಮಾರು ಎರಡುವರೆ ತಿಂಗಳ ಬಳಿಕ ಪೊಲೀಸರು ಮೃತದೇಹವನ್ನು ಹೊರಗೆ ತೆಗೆದಿದ್ದಾರೆ.

ಎಫ್ಎಸ್ಎಲ್ ತನಿಖೆಯ ಮೂಲಕ ಸಾವಿನ ರಹಸ್ಯ ಹೊರಬೀಳುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.








