

ಬಂಟ್ವಾಳ: ವಾಟ್ಸಾಪ್ ಸ್ಟೇಟಸ್ ನಲ್ಲಿ ಹಂಚಿಕೊಂಡ ಪೋಸ್ಟರ್ ವಿಚಾರಕ್ಕೆ ಸಂಬಂಧಿಸಿದಂತೆ ವಿಕಲಚೇತನ ವ್ಯಕ್ತಿಯೊಬ್ಬರ ಮೇಲೆ ಗುಂಪು ದಾಳಿ ನಡೆದ ಘಟನೆ ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ಗೋಳಿಕಟ್ಟೆಯಲ್ಲಿ ನಡೆದಿದೆ.
ದೂರುದಾರ ವಿವೇಕಾನಂದ ಶೆಟ್ಟಿ (47) ಅವರು ವಿಕಲಚೇತನರಾಗಿದ್ದು, ನಿನ್ನೆ ಅ.09 ರಂದು ಮಧ್ಯಾಹ್ನ 3 ಗಂಟೆಗೆ ಗೋಳಿಕಟ್ಟೆಯ ಹೋಟೆಲ್ ಬಳಿ ನಿಂತಿದ್ದರು.ಈ ವೇಳೆ 10 ದಿನಗಳ ಹಿಂದೆ ಅವರು ವಾಟ್ಸಾಪ್ ನಲ್ಲಿ ಹಂಚಿಕೊಂಡಿದ್ದ ಪೋಸ್ಟರ್ ವಿಚಾರವಾಗಿ ಆರೋಪಿಗಳಾದ ಕಿರಣ್ ಕುಮಾರ್, ವಿದ್ಯಾ, ಕಮಲ, ಗೌರೀಶ್ ಶೆಟ್ಟಿ, ಮೋಹನ್ ಚಂದ್ರ ಶೆಟ್ಟಿ ಮತ್ತು ರವಿ ಪೂಜಾರಿ ಅವರು ಏಕಾಏಕಿ ಬಂದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಗೌರೀಶ್ ಶೆಟ್ಟಿ ಮತ್ತು ಮೋಹನ್ ಚಂದ್ರ ಶೆಟ್ಟಿ ಅವರ ಪ್ರಚೋದನೆಯಿಂದ ಕಿರಣ್ ಕುಮಾರ್ ಮತ್ತು ರವಿ ಪೂಜಾರಿ ದೊಣ್ಣೆ ಮತ್ತು ಪೊರಕೆಯಿಂದ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕಮಲ ಮತ್ತು ವಿದ್ಯಾ ಅವರು ಚಪ್ಪಲಿಯಿಂದ ಮುಖ ಮತ್ತು ದೇಹಕ್ಕೆ ಹಲ್ಲೆ ಮಾಡಿದ್ದು, ನೆಲಕ್ಕೆ ಬಿದ್ದ ದೂರುದಾರರನ್ನು ಕಾಲಿನಿಂದ ತುಳಿದಿದ್ದಾರೆ ಎಂದು ಆರೋಪಿಸಲಾಗಿದೆ.
ಅಷ್ಟರಲ್ಲಿ ಸ್ಥಳಕ್ಕೆ ಪ್ರವೀಣ್, ಕುಸುಮಾಧರ ಮತ್ತು ಚಂದ್ರಹಾಸ ಅವರು ಬಂದಾಗ ಆರೋಪಿಗಳು ಕೊಲೆ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಹಲ್ಲೆಯಿಂದ ಗಾಯಗೊಂಡ ವಿವೇಕಾನಂದ ಶೆಟ್ಟಿ ಅವರನ್ನು ಪುತ್ತೂರು ಸಮುದಾಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 212/2026 ರಂತೆ ಪ್ರಕರಣ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಕಲಂ 352, 133, 118(1), 351(2), 190 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.








