Monday, October 12, 2026
spot_imgspot_img
spot_imgspot_img

ತೋಟಬೆಂಗ್ರೆ ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

- Advertisement -
- Advertisement -

ಮಂಗಳೂರು: ತೋಟಬೆಂಗ್ರೆಯ ಬೊಬ್ಬರ್ಯ ದೈವಸ್ಥಾನದ ಹಿಂಭಾಗದ ಸಮುದ್ರ ಕಿನಾರೆ ಬಳಿ 2024ರ ಸೆ.21ರಂದು ನಡೆದ ಮುತ್ತು ಬಸವರಾಜ ವಡ್ಡರ್ ಅಲಿಯಾಸ್ ಮುದುಕಪ್ಪ (39) ಕೊಲೆ ಪ್ರಕರಣದಲ್ಲಿ ಆರೋಪಿ ಧರ್ಮರಾಜ್ ಸುವರ್ಣ (50) ಎಂಬಾತನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.ಮಂಗಳೂರು ನಗರದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣಕ್ಕೆ ಸಂಬಂಧಿಸಿ, ಭಾಗಲಕೋಟೆ ಮೂಲದ ಮುತ್ತು ಬಸವರಾಜ ವಡ್ಡರ್ ಅವರ ಕೊಲೆಯ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಆರೋಪಿ ತೋಟಬೆಂಗ್ರೆಯ ನಿವಾಸಿ ಧರ್ಮರಾಜ್ ಸುವರ್ಣನನ್ನು 2024ರ ಸೆ.26ರಂದು ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಚೊಂಪಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಲಾಗಿತ್ತು.

ಆರೋಪಿ ಧರ್ಮರಾಜ್ ಸುವರ್ಣ ಹಾಗೂ ಮೃತ ಮುತ್ತು ಬಸವರಾಜ ವಡ್ಡರ್ ಪರಸ್ಪರ ಪರಿಚಿತರಾಗಿದ್ದರು. ಧರ್ಮರಾಜ್ ಇತ್ತೀಚೆಗೆ ಖರೀದಿಸಿದ್ದ ಮೊಬೈಲ್ ಫೋನ್‌ ಅನ್ನು ಮುತ್ತು ಬಸವರಾಜ ತೆಗೆದುಕೊಂಡು ವಾಪಸ್ ನೀಡದೆ, ಮೊಬೈಲ್ ಹಾಳು ಮಾಡಿದ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಧರ್ಮರಾಜ್ ಮರದ ಸೋಂಟೆಯಿಂದ ಹೊಡೆದು ಮುತ್ತು ಬಸವರಾಜನನ್ನು ಕೊಲೆ ಮಾಡಿದ್ದ ಎಂದು ತನಿಖೆಯಿಂದ ತಿಳಿದುಬಂದಿತ್ತು.

ಪ್ರಕರಣದ ತನಿಖೆ ಪೂರ್ಣಗೊಳಿಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಶೇಷ ಪ್ರಕರಣ ಸಂಖ್ಯೆ 207/2024ರಂತೆ ವಿಚಾರಣೆ ನಡೆದಿದ್ದು, ಅ.12ರಂದು ನ್ಯಾಯಾಧೀಶರಾದ ಜಗದೀಶ್ ಅವರು ಆರೋಪಿ ಧರ್ಮರಾಜ್ ಸುವರ್ಣನಿಗೆ ಭಾರತೀಯ ನ್ಯಾಯ ಸಂಹಿತೆಯ ಕಲಂ 103(1)ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಹಾಗೂ 15,000 ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲವಾದಲ್ಲಿ ಆರು ತಿಂಗಳ ಸರಳ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಿದ್ದಾರೆ.

ಪ್ರಕರಣದ ಆರಂಭಿಕ ತನಿಖೆಯನ್ನು ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮೊಹಮ್ಮದ್ ಸಲೀಂ ಅಬ್ಬಾಸ್ ನಡೆಸಿದ್ದರು. ಬಳಿಕ ಎಸ್‌ಸಿ-ಎಸ್‌ಟಿ ಕಾಯ್ದೆಯ ಕಲಂಗಳನ್ನು ಪ್ರಕರಣಕ್ಕೆ ಸೇರಿಸಿದ ಹಿನ್ನೆಲೆಯಲ್ಲಿ ಮುಂದಿನ ತನಿಖೆಯನ್ನು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ್ ಕೆ. ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ್ ನಾಯಕ ವಾದ ಮಂಡಿಸಿದ್ದರು.

- Advertisement -

Related news

error: Content is protected !!