


ಪುತ್ತೂರು: ನಿಷೇಧಿತ ಕೇರಳ ಲಾಟರಿ ಮಾರಾಟಕ್ಕೆ ಸಂಬಂಧಿಸಿದಂತೆ ಪುತ್ತೂರು ನಗರ ಠಾಣಾ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ದಿನಾಂಕ 14-10-2026ರಂದು ಸಂಜೆ ವೇಳೆ ಪುತ್ತೂರು ಕಸಬ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಅಂಗಡಿಯೊಂದರಲ್ಲಿ ಅಕ್ರಮವಾಗಿ ನಿಷೇಧಿತ ಕೇರಳ ರಾಜ್ಯದ ಲಾಟರಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ವಾಸು ನಾಯ್ಕ್ ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಆಗ ಅಂಗಡಿ ಮಾಲಿಕ ಪುತ್ತೂರು ಕಸಬ ನಿವಾಸಿ ಶ್ರೀನಿವಾಸ ಪೈ (33) ಅವರು ಕೇರಳ ರಾಜ್ಯದ ಲಾಟರಿಯನ್ನು ತಂದು ಅಕ್ರಮವಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದು, ಮಾರಾಟಕ್ಕಾಗಿ ತಂದಿದ್ದ ಲಾಟರಿ ಟಿಕೆಟ್ಗಳನ್ನು ಹಾಜರುಪಡಿಸಿದ್ದಾರೆ. ಅವುಗಳನ್ನು ಸ್ವಾಧೀನಪಡಿಸಿಕೊಂಡು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 124/2026, ಕಲಂ 7(iii) ಲಾಟರಿ ನಿಷೇಧ ಕಾಯ್ದೆ 1998ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಇದೇ ರೀತಿ ಪುತ್ತೂರು ಕಸಬ ಗ್ರಾಮದ ಲಿನೆಟ್ ಜಂಕ್ಷನ್ ಬಳಿ ಪಾನ್ ಸ್ಟಾಲ್ ಅಂಗಡಿಯಲ್ಲಿ ಅಕ್ರಮವಾಗಿ ನಿಷೇಧಿತ ಕೇರಳ ಲಾಟರಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಗಂಗಾಧರ ಎ.ಬಿ ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದ್ದಾರೆ.ಅಂಗಡಿ ಮಾಲಿಕ ಪುತ್ತೂರು ಪಡ್ನೂರು ಗ್ರಾಮ ನಿವಾಸಿ ಲಕ್ಷ್ಮಣ (42) ಅವರು ಕೇರಳದಿಂದ ತಂದು ಅಕ್ರಮವಾಗಿ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದು, ಟಿಕೆಟ್ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 125/2026, ಕಲಂ 7(iii) ಲಾಟರಿ ನಿಷೇಧ ಕಾಯ್ದೆ 1998ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.








