

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಮುಂಬೈನ ಜುಹು ಪ್ರದೇಶದಲ್ಲಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಮೂವರು ಆರೋಪಿಗಳೂ ಅಪ್ರಾಪ್ತರಲ್ಲ ಎಂದು ಮುಂಬೈ ಡಿಸಿಪಿ ರಾಜ್ ತಿಲಕ್ ರೋಷನ್ ಸ್ಪಷ್ಟಪಡಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬನಿಗೆ 18 ವರ್ಷ ಹಾಗೂ ಉಳಿದ ಇಬ್ಬರಿಗೆ 22 ವರ್ಷ ವಯಸ್ಸಾಗಿದೆ ಎಂದು ತಿಳಿಸಿದ್ದಾರೆ.


ಭಾನುವಾರ ಸಂಜೆ ಜುಹುವಿನ ಫುಟ್‌ಬಾಲ್ ಕ್ಲಬ್ ಎದುರು ಬೈಕ್‌ನಲ್ಲಿ ಬಂದ ಇಬ್ಬರು ಶೂಟರ್‌ಗಳು ಟೈಗರ್ ಶ್ರಾಫ್ ಅವರ ಕಾರಿನ ಮೇಲೆ 5ರಿಂದ 7 ಸುತ್ತು ಗುಂಡು ಹಾರಿಸಿದ್ದರು. ಘಟನೆಯಲ್ಲಿ ನಟ ಗಾಯಗೊಳ್ಳದೆ ಪಾರಾಗಿದ್ದು, ಅವರ ಚಾಲಕ ಸೇರಿದಂತೆ ಇಬ್ಬರು ಗಾಯಗೊಂಡಿದ್ದರು.ಪ್ರಕರಣದ ತನಿಖೆ ಕೈಗೊಂಡ ಮುಂಬೈ ಕ್ರೈಂ ಬ್ರಾಂಚ್ 20 ವಿಶೇಷ ತಂಡಗಳನ್ನು ರಚಿಸಿತ್ತು. ಸಿಸಿಟಿವಿ ದೃಶ್ಯಾವಳಿ ಹಾಗೂ ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಲಾಗಿತ್ತು. ಆರೋಪಿಗಳು ಅಂಧೇರಿ ಪ್ರದೇಶದಲ್ಲಿ ಬೈಕ್ ಬಿಟ್ಟು ರೈಲಿನ ಮೂಲಕ ಪರಾರಿಯಾಗಲು ಯತ್ನಿಸಿದ್ದರು. ಗುಜರಾತ್‌ನ ಸೂರತ್ ಮಾರ್ಗವಾಗಿ ಪುಣೆ-ಜೈಪುರ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಆರೋಪಿಗಳನ್ನು ರಾಜಸ್ಥಾನದ ಕೋಟಾ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ದೆಹಲಿ, ಗುಜರಾತ್ ಹಾಗೂ ರಾಜಸ್ಥಾನ ಪೊಲೀಸರೂ ಸಹಕರಿಸಿದ್ದಾರೆ.
ಬಂಧಿತ ಮೂವರು ಆರೋಪಿಗಳು ಹರಿಯಾಣ ಮತ್ತು ಬಿಹಾರ ಮೂಲದವರಾಗಿದ್ದಾರೆ. ಅವರಿಂದ ಯಾವುದೇ ಶಸ್ತ್ರಾಸ್ತ್ರಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಕೊಲೆ ಯತ್ನ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.ಘಟನೆಯ ಬೆನ್ನಲ್ಲೇ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ದಾಳಿಯ ಹೊಣೆ ಹೊತ್ತುಕೊಂಡಿದೆ ಎನ್ನಲಾದ ಸಾಮಾಜಿಕ ಜಾಲತಾಣದ ಪೋಸ್ಟ್ ವೈರಲ್ ಆಗಿತ್ತು.
ಆದರೆ, ಅದರ ಸತ್ಯಾಸತ್ಯತೆ ಇನ್ನೂ ದೃಢಪಟ್ಟಿಲ್ಲ. ಟೈಗರ್ ಶ್ರಾಫ್ ಅವರಿಗೆ ಈ ಹಿಂದೆ ಬೆದರಿಕೆ ಕರೆಗಳು ಬಂದಿರುವ ಬಗ್ಗೆ ದಾಖಲೆಗಳಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಯ ಹಿಂದಿನ ಉದ್ದೇಶ ಮತ್ತು ಇತರ ಆಯಾಮಗಳ ಕುರಿತು ತನಿಖೆ ಮುಂದುವರಿದಿದೆ.








