


ಬೆಂಗಳೂರು : ನಂದಿನಿ ಹಾಲಿನ ದರ ಏರಿಕೆ ಬೆನ್ನಲ್ಲೇ ಇದೀಗ ಹೋಟೆಲ್ಗಳಲ್ಲೂ ದರ ಏರಿಕೆ ಬಿಸಿ ತಟ್ಟಲಿದೆ. ಟೀ, ಕಾಫಿ ಮಾತ್ರವಲ್ಲ, ಹಾಲಿನಿಂದ ತಯಾರಿಸುವ ತಿಂಡಿ-ತಿನಿಸುಗಳ ಬೆಲೆಯನ್ನು ಹೆಚ್ಚಿಸಲು ಹೋಟೆಲ್ ಮಾಲೀಕರು ಮುಂದಾಗಿದ್ದಾರೆ.
ಹಾಲಿನ ದರವನ್ನು ಏಕಾಏಕಿ 8 ರೂ. ಹೆಚ್ಚಿಸಿರುವುದರಿಂದ ಹೋಟೆಲ್ ಉದ್ಯಮದ ಮೇಲೆ ಹೊರೆ ಹೆಚ್ಚಾಗಿದೆ. ಹೀಗಾಗಿ ನಷ್ಟ ಸರಿದೂಗಿಸಿಕೊಳ್ಳಲು ಬೆಲೆ ಏರಿಕೆ ಅನಿವಾರ್ಯ ಎಂದು ಹೋಟೆಲ್ ಮಾಲೀಕರು ಹೇಳ್ತಿದ್ದಾರೆ.
ಈಗಾಗಲೇ ಅಕ್ಕಿ, ಎಣ್ಣೆ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಹೋಟೆಲ್ ಮಾಲೀಕರಿಗೆ ಹಾಲಿನ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೀಗಾಗಿ ನವೆಂಬರ್ ಮೊದಲ ವಾರದಿಂದಲೇ ಹೋಟೆಲ್ಗಳಲ್ಲಿ ದರ ಹೆಚ್ಚಳವಾಗುವ ಸಾಧ್ಯತೆಯಿದೆ. ಟೀ, ಕಾಫಿ ಬೆಲೆ 2ರಿಂದ 5 ರೂ. ಹೆಚ್ಚಳವಾಗಬಹುದು. ಇನ್ನು ಊಟ, ತಿಂಡಿ ಸೇರಿದಂತೆ ಇತರ ಪದಾರ್ಥಗಳ ಬೆಲೆ 10ರಿಂದ 20 ರೂ.ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ.
ಈ ಬಗ್ಗೆ ಮಾತನಾಡಿರುವ ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಮಧುಕರ್ ಶೆಟ್ಟಿ, ಬೆಲೆ ಏರಿಕೆಯ ನಿರ್ಧಾರವನ್ನು ಆಯಾ ಹೋಟೆಲ್ ಮಾಲೀಕರಿಗೆ ಬಿಡಲಾಗಿದೆ ಎಂದಿದ್ದಾರೆ. ಹೋಟೆಲ್ನ ವ್ಯಾಪಾರ, ವೆಚ್ಚ ಹಾಗೂ ನಷ್ಟದ ಪ್ರಮಾಣವನ್ನು ಲೆಕ್ಕಹಾಕಿ ಬೆಲೆ ಹೆಚ್ಚಳ ಮಾಡಬಹುದು. ಕಾಫಿ ಬೆಲೆ 20ರಿಂದ 30 ರೂ.ವರೆಗೆ ತಲುಪುವ ಸಾಧ್ಯತೆಯಿದೆ ಎಂದಿದ್ದಾರೆ.
ಇನ್ನು ಹೋಟೆಲ್ ಉದ್ಯಮದಲ್ಲಿನ ನಷ್ಟವನ್ನು ಸರಿದೂಗಿಸಲು ಬೆಲೆ ಏರಿಕೆ ಅನಿವಾರ್ಯ ಅಂತ ಮಾಲೀಕರು ಹೇಳುತ್ತಿದ್ದಾರೆ. ನವೆಂಬರ್ 1ರ ಬಳಿಕ ವ್ಯಾಪಾರದ ಲಾಭ-ನಷ್ಟವನ್ನು ಪರಿಶೀಲಿಸಿ ದರ ಹೆಚ್ಚಳದ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ. ಕೆಲವು ಹೋಟೆಲ್ಗಳಲ್ಲಿ ಕಾಫಿ, ಟೀ ಬೆಲೆ 25ರಿಂದ 40 ರೂಪಾಯಿವರೆಗೂ ತಲುಪಬಹುದು ಎಂಬ ಅಂದಾಜಿದೆ.








