


ಬೆಳಗಾವಿ: ಪ್ರೀತಿಸಿದ ಯುವತಿಯನ್ನು ಪೇದೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ರಕ್ಷಿತಾ ಸರಿಕರ್ (23) ಕೊಲೆಯಾದ ಯುವತಿ. ಪ್ರಿಯಕರ ಕೇಂದ್ರ ಸಶಸ್ತ್ರ ಸೀಮಾ ಬಲದ ಪೇದೆ ಬಸಪ್ಪ ಸಾತನ್ನವಣ್ಣರ್ ಕೃತ್ಯವೆಸಗಿದ್ದಾನೆ. ಹಾರೋಗೇರಿ ಗ್ರಾಮದ ರಕ್ಷಿತಾ ಜೊತೆಗೆ ಬಸಪ್ಪ ಪ್ರೀತಿಯಲ್ಲಿ ಬಿದ್ದಿದ್ದ. ಕಳೆದ ನಾಲ್ಕು ವರ್ಷಗಳಿಂದ ಜೋಡಿ ಪರಸ್ಪರ ಪ್ರೀತಿಸುತ್ತಿದ್ದರು. ಅಕ್ಟೋಬರ್ 28ಕ್ಕೆ ಸುತ್ತಾಡಲು ಅಂತ ಕರೆದು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಉಸಿರುಗಟ್ಟಿಸಿ, ಹೊಡೆದು ಭೀಕರವಾಗಿ ಕೊಲೆ ಮಾಡಿದ್ದಾನೆ.
ಕೊಲೆ ಬಳಿಕ ಪೇದೆ ಬಸಪ್ಪ ವಾಪಸ್ ಊರಿಗೆ ಬಂದಿದ್ದಾನೆ. ರಕ್ಷಿತಾ ಸಹೋದರನ ಜೊತೆ ಸೇರಿ ಹುಡುಕಾಟಕ್ಕೂ ಯತ್ನಿಸಿದ್ದಾನೆ. ಬಳಿಕ ರಕ್ಷಿತಾ ಸಹೋದರ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದಾನೆ. ಪ್ರಕರಣ ಸಂಬಂಧ ಹಾರೋಗೇರಿ ಪೊಲೀಸರು ಬಸಪ್ಪನ್ನು ಕರೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೊಲೆ ಮಾಡಿರೋದಾಗಿ ಬಸಪ್ಪ ಒಪ್ಪಿಕೊಂಡಿದ್ದಾನೆ. ಘಟನೆ ಸಂಬಂಧ ಗೋಕಾಕ್ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.








