Thursday, November 5, 2026
spot_imgspot_img
spot_imgspot_img

ಉಡುಪಿ: ಉದ್ಯಮಿ ಡೇವಿಡ್ ಡಿಸೋಜಾ ಕೊಲೆ ಪ್ರಕರಣ; 10 ಆರೋಪಿಗಳ ಬಂಧನ

- Advertisement -
- Advertisement -

ಉಡುಪಿ: ಕಾಪು ತಾಲೂಕಿನ ಮುದರಂಗಡಿಯ ಸೇಂಟ್ ಕ್ಸೇವಿಯರ್ ಚರ್ಚ್ ಕಾಂಪ್ಲೆಕ್ಸ್‌ನಲ್ಲಿ ಉದ್ಯಮಿ ಡೇವಿಡ್ ಡಿಸೋಜಾ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣದಲ್ಲಿ ಸಂಘಟಿತ ಅಪರಾಧದ ಅಂಶಗಳು ಕಂಡುಬಂದ ಹಿನ್ನೆಲೆಯಲ್ಲಿ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ ಅಡಿಯಲ್ಲಿ ತನಿಖೆ ನಡೆಸಲು ಅನುಮತಿ ದೊರೆತಿದೆ.

ಆಗಸ್ಟ್ 7ರಂದು ಮಧ್ಯಾಹ್ನ 3:45ರ ಸುಮಾರಿಗೆ ಮುದರಂಗಡಿಯ ಸೇಂಟ್ ಕ್ಸೇವಿಯರ್ ಚರ್ಚ್ ಕಾಂಪ್ಲೆಕ್ಸ್‌ನಲ್ಲಿರುವ ಪ್ರಿನ್ಸ್ ಎಂಟರ್‌ಪ್ರೈಸಸ್‌ನ ಮಾಲೀಕ ಡೇವಿಡ್ ಡಿಸೋಜಾ ಅವರನ್ನು ಮೋಟಾರ್ ಸೈಕಲ್‌ನಲ್ಲಿ ಬಂದ ದುಷ್ಕರ್ಮಿಗಳು ಪಿಸ್ತೂಲಿನಿಂದ ತಲೆಗೆ ಗುಂಡು ಹಾರಿಸಿ ಕೊಲೆ ಮಾಡಿದ್ದರು. ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಯುತ್ತಿದ್ದ ವೇಳೆ ಕೊಲೆಯಲ್ಲಿ ನೇರವಾಗಿ ಭಾಗಿಯಾಗಿದ್ದ ಮೂವರು ಆರೋಪಿಗಳು ಬಸ್ಸಿನಲ್ಲಿ ಭಟ್ಕಳದ ಕಡೆಗೆ ತೆರಳುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಅದರಂತೆ ಬೈಂದೂರಿನ ಒತ್ತಿನಾಣೆ ಎಂಬಲ್ಲಿ ಬಸ್ಸನ್ನು ತಡೆದು ತಪಾಸಣೆ ನಡೆಸಿದಾಗ, ಬಸ್ಸಿನಲ್ಲಿದ್ದ ಮೂವರು ಆರೋಪಿಗಳು ಇಳಿದು ಓಡಲು ಯತ್ನಿಸಿದ್ದಾರೆ. ಈ ವೇಳೆ ಅವರನ್ನು ಬೆನ್ನಟ್ಟಿದ ಪೊಲೀಸರ ಮೇಲೆ ಆರೋಪಿಗಳ ಪೈಕಿ ಓರ್ವ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ. ಕಾಪು ಪೊಲೀಸ್ ಠಾಣೆಯ ಪಿಎಸ್‌ಐ ಅವರನ್ನು ತಳ್ಳಿ, ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ ಆರೋಪಿಯ ಕಾಲಿಗೆ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಆತನ ಬಳಿಯಿದ್ದ ಪಿಸ್ತೂಲನ್ನೂ ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿ ಉತ್ತರ ಪ್ರದೇಶದ ರಾಜು @ ಫಾಜಿ(42) ಎಂಬಾತನೇ ಡೇವಿಡ್ ಡಿಸೋಜಾ ಅವರನ್ನು ತನ್ನ ಪಿಸ್ತೂಲಿನಿಂದ ಗುಂಡು ಹಾರಿಸಿ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಪೊಲೀಸರ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆಯೂ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಶಿರ್ವ ಪೊಲೀಸ್ ಠಾಣೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಾಖಂಡದ ಅನ್ಮೋಲ್ ರಸ್ತೋಗಿ, ಬಿಹಾರದ ಜಿಯಾಹುಲ್ ವಜೂಲ್ ಶೇಖ್, ಎರ್ಮಾಳಿನ ಚಿರಾಗ್ ಪೂಜಾರಿ, ಎರ್ಮಾಳು ನಿವಾಸಿಗಳಾದ ಮೊಹಮ್ಮದ್ ಇರ್ಷಾದ್ ಮತ್ತು ಸದಾನಂದ ದೇವಾಡಿಗ, ಕಾಪು ತಾಲೂಕಿನ ಅದಮಾರು ಗ್ರಾಮದ ಕಿಶೋರ್ ರಾಮ ಪೂಜಾರಿ, ಬಿಹಾರದ ಸೂರಜ್ ಕುಮಾರ್, ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಲೋಕೇಶ್ ತೇಜ ಕೊಠಾರಿ ಹಾಗೂ ಬಿಹಾರದ ಅನೂಜ್ ಕುಮಾರ್ ಕಮಲೇಶ್ವರ ಪ್ರಸಾದ್ ಪಟೇಲ್ ಅವರನ್ನು ಬಂಧಿಸಲಾಗಿದೆ.
ಪ್ರಕರಣದ 11ನೇ ಆರೋಪಿಯಾಗಿರುವ ಭೂಗತ ಪಾತಕಿ ಹೇಮಂತ್ ಪೂಜಾರಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ತನಿಖೆ ವೇಳೆ ಆರೋಪಿಗಳು ಭೂಗತ ಪಾತಕಿ ಹೇಮಂತ್ ಪೂಜಾರಿ, ಅನೂಜ್ ಕುಮಾರ್ ಕಮಲೇಶ್ವರ ಪ್ರಸಾದ್ ಪಟೇಲ್ ಹಾಗೂ ಕಿಶೋರ್ ಪೂಜಾರಿ ಅವರೊಂದಿಗೆ ಸೇರಿಕೊಂಡು ಸಂಘಟಿತ ಅಪರಾಧದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ ಅಡಿಯಲ್ಲಿ ತನಿಖೆ ನಡೆಸಲು ಅನುಮತಿ ಕೋರಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಮೂಲಕ ಪಶ್ಚಿಮ ವಲಯ ಪೊಲೀಸ್ ಉಪ ಮಹಾನಿರೀಕ್ಷಕರಿಗೆ ಮನವಿ ಸಲ್ಲಿಸಲಾಗಿತ್ತು.

ಮನವಿಯನ್ನು ಪರಿಶೀಲಿಸಿದ ಪಶ್ಚಿಮ ವಲಯ ಪೊಲೀಸ್ ಉಪ ಮಹಾನಿರೀಕ್ಷಕರು, ಹೇಮಂತ್ ಪೂಜಾರಿ, ಅನೂಜ್ ಕುಮಾರ್ ಕಮಲೇಶ್ವರ ಪ್ರಸಾದ್ ಪಟೇಲ್ ಹಾಗೂ ಅವರ ಸಹಚರರ ವಿರುದ್ಧ ಕೆಸಿಒಸಿಎ ಕಾಯ್ದೆಯಡಿ ತನಿಖೆ ನಡೆಸಲು ಅನುಮತಿ ನೀಡಿದ್ದಾರೆ. ಅದರಂತೆ ಪ್ರಕರಣದ ಆರೋಪಿಗಳು ಹಾಗೂ ಸಂಪೂರ್ಣ ಕಡತವನ್ನು ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ ಕೋಕ ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗಿದೆ.

ಪ್ರಕರಣದ ಎಲ್ಲಾ ಆರೋಪಿಗಳು ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮುಂದಿನ ತನಿಖಾಧಿಕಾರಿಯಾಗಿ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರನ್ನು ನೇಮಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ.

- Advertisement -

Related news

error: Content is protected !!