ಮಂಗಳೂರು: ಕರ್ತವ್ಯದ ಸಮಯದಲ್ಲೇ ಬಾರ್ ನಲ್ಲಿ ಪಾರ್ಟಿ ನಡೆಸಿದ ಎಂಟು ಸಿಸಿಬಿ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಿ ಮಂಗಳೂರು ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದಾರೆ. ಎಲ್ಲ ಎಂಟು ಸಿಬ್ಬಂದಿಗಳನ್ನು ವರ್ಗಾವಣೆಗೊಳಿಸಿರುವುದಾಗಿ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ಮಂಗಳೂರು ಹೊರವಲಯದ ಕುತ್ತಾರು ಬಳಿ ಬಾರ್‌ವೊಂದರಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಪಾರ್ಟಿ ನಡೆಸಿದ್ದರು. ಪೊಲೀಸರು ಪಾರ್ಟಿಯಲ್ಲಿ ಭಾಗವಹಿಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡಿದ ಬೆನ್ನಲ್ಲೇ ಪೊಲೀಸ್ ಆಯುಕ್ತರು ಶಿಸ್ತುಕ್ರಮ ಕೈಗೊಂಡಿದ್ದಾರೆ.

ಘಟನೆಯಲ್ಲಿ ಭಾಗಿಯಾದ ಸಿಸಿಬಿ ಘಟಕದ ಎಂಟು ಸಿಬ್ಬಂದಿಗಳನ್ನು ತಕ್ಷಣದಿಂದ ಸಿಸಿಬಿಯಿಂದ ನಗರ ಪೊಲೀಸ್ ಕಮಿಷನರೇಟ್‌ನ ಬೇರೆ ಬೇರೆ ಪೊಲೀಸ್ ಠಾಣೆಗಳಿಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದ್ದಾರೆ. ಸಿಬ್ಬಂದಿ ವಿರುದ್ಧ ಹೆಚ್ಚುವರಿ ಇಲಾಖೆ ವಿಚಾರಣೆ ಕೈಗೊಂಡು ಕೂಲಂಕಷ ವಿಚಾರಣಾ ವರದಿ ಸಲ್ಲಿಕೆಗೆ ಡಿಸಿಪಿಗಳಿಗೆ ಸೂಚಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಮದ್ಯಸೇವನೆ ಮಾಡಿದ್ದ ಮೂವರು ಎಎಸ್‌ಐ ಮತ್ತು ಐವರು ಹೆಡ್‌ಕಾನ್‌ಸ್ಟೆಬಲ್‌ರನ್ನು ಬೇರೆ ಬೇರೆ ಠಾಣೆಗಳಿಗೆ ವರ್ಗಾಯಿಸಿದ್ದಾರೆ. ಎಂಟು ಮಂದಿ ಪೊಲೀಸರು ಬೆಟ್ಟಿಂಗ್ ಪ್ರಕರಣದ ಆರೋಪಿ ಜತೆ ಊಟ ಮಾಡಿರುವುದು, ಆತನಿಗೆ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಪೊಲೀಸರ ವಿರುದ್ಧ ಇಲಾಖಾ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಯುಕ್ತರು ತಿಳಿಸಿದ್ದಾರೆ.

