
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ವಾತಂತ್ರ್ಯೋತ್ಸವ ಭಾಷಣದ ವೇಳೆ ಹಲವು ಪ್ರಮುಖ ಯೋಜನೆಗಳನ್ನು ಘೋಷಿಸಿದ್ದಾರೆ. ಅದರಲ್ಲಿ ಅತ್ಯಂತ ಹೆಚ್ಚು ಗಮನಸೆಳೆದಿದ್ದು ಗತಿ ಶಕ್ತಿ ಯೋಜನೆ. ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ 100 ಲಕ್ಷ ಕೋಟಿ ವೆಚ್ಚದ ಗತಿಶಕ್ತಿ ಯೋಜನೆಗೆ ಚಾಲನೆ ನೀಡುವುದಾಗಿ ಅವರು ಹೇಳಿದರು.
ಏನಿದು ಗತಿ ಶಕ್ತಿ ಯೋಜನೆ?
ಸಮಗ್ರ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಗತಿ ಶಕ್ತಿ ಮಾಸ್ಟರ್ ಪ್ಲ್ಯಾನ್ನ್ನು ಜಾರಿಗೊಳಿಸುತ್ತಿದೆ. ಗತಿ ಶಕ್ತಿ ಯೋಜನೆಯಿಂದ ಉದ್ಯೋಗ ಸೃಷ್ಟಿಯಾಗುವ ಜತೆ, ಭವಿಷ್ಯದಲ್ಲಿ ಯುವಜನತೆಗೆ ಹೆಚ್ಚೆಚ್ಚು ಅವಕಾಶಗಳು ತೆರೆದುಕೊಳ್ಳಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದ್ದಾರೆ. ಈ ಗತಿ ಶಕ್ತಿ ಮಾಸ್ಟರ್ ಪ್ಲ್ಯಾನ್ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗೆ ಅಡಿಪಾಯ ಹಾಕುವ ಜತೆ, ಆರ್ಥಿಕ ಪ್ರಗತಿಗೂ ಹೆದ್ದಾರಿಯಾಗಲಿದೆ ಎಂದೂ ತಿಳಿಸಿದ್ದಾರೆ.
ಕೇಂದ್ರೀಕೃತ ಕ್ಷೇತ್ರಗಳು ಯಾವವು?
ಗತಿ ಶಕ್ತಿ ಯೋಜನೆ, ಸ್ಥಳೀಯ ಉತ್ಪಾದಕರಿಗೆ ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ಒದಗಿಸಿಕೊಡುವುದಲ್ಲದೆ, ಸ್ಪರ್ಧೆಗೆ ಹಾದಿ ಮಾಡಿಕೊಡುತ್ತದೆ. ಆರ್ಥಿಕ ವಲಯಕ್ಕೊಂದು ಹೊಸ ಭವಿಷ್ಯ ರೂಪಿಸಿಕೊಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಉತ್ಪಾದನೆ ಮತ್ತು ರಫ್ತು ಎರಡೂ ವಲಯದಲ್ಲಿ ಭಾರತದ ವ್ಯಾಪ್ತಿ ಹೆಚ್ಚಬೇಕಿದೆ. ಭಾರತದಿಂದ ಜಾಗತಿಕವಾಗಿ ಉತ್ಪಾದನೆಯಾಗುವ ಪ್ರತಿ ವಸ್ತುವೂ ಭಾರತದ ಬ್ರ್ಯಾಂಡ್ ಅಂಬಾಸಿಡರ್ ಆಗಲಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ನಮ್ಮ ವ್ಯಾಪ್ತಿ ಹೆಚ್ಚಲಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ಸದ್ಯ ಈ ಯೋಜನೆಯ ಬಗ್ಗೆ ಇನ್ಯಾವುದೇ ಮಾಹಿತಿಯಿಲ್ಲ. ಶೀಘ್ರವೇ ಕೇಂದ್ರ ಸರ್ಕಾರ ಇದರ ಬಗ್ಗೆ ಎಲ್ಲ ವಿವರಗಳನ್ನೂ ನೀಡಲಿದೆ. ಪ್ರಧಾನಿ ಮೋದಿ ಇಂದು ಗತಿ ಶಕ್ತಿ ಯೋಜನೆಯೊಂದಿಗೆ, ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಮತ್ತು ಎಲ್ಲ ಸೈನಿಕ ಶಾಲೆಗಳಲ್ಲೂ ಹೆಣ್ಣು ಮಕ್ಕಳಿಗೆ ಪ್ರವೇಶ ನೀಡುವ ಯೋಜನೆಗಳನ್ನು ಪ್ರಕಟಿಸಿದ್ದಾರೆ.


