
ಸಾವಿರ ಸುಳ್ಳು ಹೇಳಿಯಾದರೂ ಒಂದು ಮದುವೆ ಮಾಡು ಎಂಬ ಮಾತಿಗೆ. ಆದರೆ ಇದು ಈ ಕಾಲಕ್ಕೆ ಅನ್ವಯವಾಗುವುದಿಲ್ಲ. ಯಾಕೆಂದರೆ ಅನಾರೋಗ್ಯದ ಸಮಸ್ಯೆ ಮುಚ್ಚಿಟ್ಟು ಮದುವೆಯಾಗುವುದು ಬಹುದೊಡ್ಡ ವಂಚನೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.
ಅನಾರೋಗ್ಯದ ಸಮಸ್ಯೆಗಳನ್ನು ಮುಚ್ಚಿಟ್ಟು ಮದುವೆಯಾಗುವುದರಿಂದ ಮದುವೆಯ ಬಳಿಕ ಮದುವೆಯಾದವರು ಸಾಕಷ್ಟು ಸಂಕಷ್ಟ ಪಡಬೇಕಾಗುತ್ತದೆ. ಹೀಗಾಗಿಯೇ ಇದೇ ರೀತಿ ಪ್ರಕರಣವೊಂದರ ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್ ಮದುವೆಗೆ ಮುನ್ನ ಅನಾರೋಗ್ಯದ ವಿಚಾರವನ್ನು ಮರೆಮಾಚುವುದು ವಂಚನೆ ಎಂದು ಮಹತ್ವದ ತೀರ್ಪು ನೀಡಿದೆ.

ಅಷ್ಟೇ ಅಲ್ಲದೆ ಆರೋಗ್ಯದ ವಿಚಾರವನ್ನು ಮುಚ್ಚಿಟ್ಟು ಮದುವೆಯಾಗಿದ್ದ ಮದುವೆಯೊಂದನ್ನು 16 ವರ್ಷಗಳ ನಂತರ ಇದೀಗ ದೆಹಲಿ ಹೈಕೋರ್ಟ್ ರದ್ದುಗೊಳಿಸುವ ಮೂಲಕ ಮಹತ್ತರ ನಡೆ ಅನುಸರಿಸಿದೆ.

ಹದಿನಾರು ವರ್ಷಗಳ ಹಿಂದೆ ವಿವಾಹವಾಗುವ ಮೊದಲು ಹೆಂಡತಿ ತಾನು ಮಾನಸಿಕ ಅಸ್ವಸ್ಥೆಯಾಗಿದ್ದೆ ಎಂಬ ವಿಚಾರವನ್ನು ಮರೆಮಾಚಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಳು. ಹೀಗಾಗಿ ಪತಿ ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದ. ಆದರೆ ಕೌಟುಂಬಿಕ ನ್ಯಾಯಾಲಯ ವಿಚ್ಛೇದನದ ಅರ್ಜಿ ತಿರಸ್ಕಾರ ಮಾಡಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದ. ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ಜಸ್ಮೀತ್ ಸಿಂಗ್ ಅವರ ಪೀಠವು ಸೂಕ್ತ ವಿಚಾರಣೆ ನಡೆಸಿ ಅರ್ಜಿದಾರನ ಪತ್ನಿ ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದಾರೆ ಎಂಬುದು ಸಾಬೀತಾಗಿದೆ ಎಂದು ತಿಳಿಸಿದರು.

ಇನ್ನು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ಪಾಲುದಾರರೊಂದಿಗೆ ಬದುಕುವುದು ಸುಲಭವಲ್ಲ. ಮದುವೆಯಲ್ಲಿನ ಸಮಸ್ಯೆಗಳ ತಿಳುವಳಿಕೆ ಮತ್ತು ಪಾಲುದಾರರ ನಡುವಿನ ಸಂವಹನದ ಅಗತ್ಯವಿದೆ – ವಿಶೇಷವಾಗಿ ಮದುವೆಯಲ್ಲಿ ಇಬ್ಬರು ಪಾಲುದಾರರಲ್ಲಿ ಒಬ್ಬರು ತಮ್ಮದೇ ಆದ ಸವಾಲುಗಳನ್ನು ಎದುರಿಸುತ್ತಿರುವಾಗ ಇದು ಮತ್ತಷ್ಟು ಕಷ್ಟಕರವಾಗಿರುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಇನ್ನು ಇದೇ ವೇಳೇ ನ್ಯಾಯಾಲಯ 21 ಪುಟಗಳ ಆದೇಶದಲ್ಲಿ ಪತ್ನಿ ತನ್ನ ವಿವಾಹದ ಮೊದಲು ತನ್ನ ಮಾನಸಿಕ ಅಸ್ವಸ್ಥತೆಯನ್ನು ಮುಚ್ಚಿಟ್ಟು ಪತಿಯೊಂದಿಗೆ ವಿವಾಹವಾಗಿರುವುದು ಆತನಿಗೆ ಮಾಡಿದ ವಂಚನೆಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇನ್ನು ಕೋರ್ಟ್ ಆದೇಶದಂತೆ ವೈದ್ಯಕೀಯ ತಜ್ಞರು ಮಂಡಳಿಯಿಂದ ಪತ್ನಿ ವೈದ್ಯಕೀಯ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಿದಾಗ ಅದನ್ನು ನಿರಾಕರಿಸಿದ್ದಾಳೆ.

ಹೀಗಾಗಿ ಆಕೆಯ ವೈದ್ಯಕೀಯ ತಪಾಸಣೆಗೆ ಒಳಗಾಗಲು ನಿರಾಕರಣೆ ಮಾಡಿದ್ದು, ಆಕೆಯ ಮಾನಸಿಕ ಅಸ್ವಸ್ಥೆ ಎಂದು ಸಾಬೀತುಪಡಿಸುತ್ತಿದೆ. ಅವರು ವೈದ್ಯಕೀಯ ಪರೀಕ್ಷೆಗೆ ಎದುರಾಗಲು ಸಿದ್ಧರಿಲ್ಲ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಾಗಿದೆ ಎಂದು ಕೋರ್ಟ್ ಹೇಳಿದೆ. ಇನ್ನು ನಾನು ಯಾವುದೇ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿಲ್ಲ ಎಂದು ಹೇಳಿಕೊಳ್ಳುತ್ತಿರುವ ಪತ್ನಿಯು ವೈವಾಹಿಕ ಜೀವನವನ್ನು ಮರು ಪ್ರಾರಂಭ ಮಾಡಲು ಬಯಸುತ್ತಾರೆ. ಆದರೆ ಆಕೆ ವೈದ್ಯಕೀಯ ಪರೀಕ್ಷೆಗೆ ಒಳಗಾಗದೇ ಇರುವುದು ಆಕೆಯ ಪತಿಗೆ ಮಾಡುತ್ತಿರುವ ವಂಚನೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

