

ಮಂಗಳೂರಿನ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಒಂದಾಗಿರುವ ಸ್ಟೇಟ್‌ಬ್ಯಾಂಕ್‌ನ ಸರ್ವಿಸ್ ಬಸ್ ನಿಲ್ದಾಣ ಮತ್ತಷ್ಟು ವಿಸ್ತಾರಗೊಳ್ಳಲಿದೆ. ಹಲವು ವರ್ಷಗಳಿಂದ ದುರಸ್ತಿಗಾಗಿ ಕಾಯುತ್ತಿರುವ ಬಸ್ ಸ್ಟ್ಯಾಂಡ್ ಅಭಿವೃದ್ಧಿಗೆ ಪಾಲಿಕೆ, ಸ್ಮಾರ್ಟ್‌ಸಿಟಿ, ಮುಡಾ ಮುಂದಾಗಿದ್ದು, ಸದ್ಯ ಸುಮಾರು 4.2 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿದೆ.
ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣ ಸಂಪರ್ಕಿತ ಸರ್ವಿಸ್ ರಸ್ತೆ ಸದ್ಯ ಇದ್ದು, ಅದನ್ನು ಕೆಡವಲಾಗುತ್ತದೆ, ನಂತರ ಆ ಪ್ರದೇಶಕ್ಕೂ ಬಸ್ ನಿಲ್ದಾಣ ವಿಸ್ತರಣೆಯಾಗಲಿದೆ. ಪೂರ್ಣ ಮಟ್ಟದ ಅಭಿವೃದ್ಧಿಗೆಂದು 15ನೇ ಹಣಕಾಸು ನಿಧಿಯಲ್ಲಿ 1 ಕೋಟಿ ರೂ., ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ 2.2 ಕೋಟಿ ರೂ. ಮತ್ತು ಮುಡಾದಿಂದ 1 ಕೋಟಿ ರೂ. ಭರಿಸಲು ಈಗಾಗಲೇ ನಿರ್ಧಾರ ಮಾಡಲಾಗಿದೆ. ಸದ್ಯದಲ್ಲಿಯೇ ಟೆಂಡರ್ ಪ್ರಕ್ರಿಯೆ ನಡೆಯಲಿದ್ದು, ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತದೆ.

ಸದ್ಯ ಬಸ್‌ನಿಲ್ದಾಣದ ಒಳಭಾಗದಲ್ಲಿರುವ ಛಾವಣಿ ಸಮರ್ಪಕ ನಿರ್ವಹಣೆ ಇಲ್ಲದೆ ತುಕ್ಕು ಹಿಡಿದಿದೆ. ಜತೆಗೆ ಬಸ್‌ಗಾಗಿ ಕಾಯುವ ಪ್ರಯಾಣಿಕರಿಗೆ ಕುಳಿತು ಕೊಳ್ಳಲು ಸೂಕ್ತ ವ್ಯವಸ್ಥೆಯಿಲ್ಲ. ದೂರದೂರಿನಿಂದ ಬರುವ ಪ್ರಯಾಣಿಕರು ಇದೇ ನಿಲ್ದಾಣವನ್ನು ಅವಲಂಬಿಸಿರುವ ಕಾರಣದಿಂದ ಸಮಸ್ಯೆಯ ಬವಣೆಗೆ ಸೊರಗಿ ಹಿಡಿಶಾಪ ಹಾಕುತ್ತಿದ್ದರು. ಇದೀಗ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದ್ದು, ಬಸ್ ನಿಲ್ದಾಣ ಪೂರ್ತಿ ಕಾಂಕ್ರೀಟ್ ಅಳವಡಿಸಲಾಗುತ್ತದೆ. ಬಸ್‌ಗಳು ತಂಗಲು ವ್ಯವಸ್ಥಿತ ಬಸ್ ಬೇ ಕಲ್ಪಿಸಲಾಗುತ್ತದೆ. ಈಗಾಗಲೇ ಶಿಥಿಲ ಗೊಂಡಿರುವ ಮೇಲ್ಛಾ ವಣಿಗಳನ್ನು ಬದಲಾಯಿಸಲಾಗುತ್ತದೆ. ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸುಸಜ್ಜಿತ ಶೌಚಾಲಯ ವ್ಯವಸ್ಥೆ ಒಳಗೊಳ್ಳಲಿದೆ.

