

ಮೇಕ್ ಇನ್ ಇಂಡಿಯಾ ಹಾಗೂ ಆತ್ಮ ನಿರ್ಭರ ಭಾರತದಂತಹ ಕ್ರಮಗಳು ಭಾರತದ ಸ್ವಾವಲಂಬನೆಯನ್ನು ಹೆಚ್ಚಿಸುತ್ತವೆ ಎಂದು ಅಮೆರಿಕ ತನ್ನ ವ್ಯಾಪಾರ ಪ್ರತಿನಿಧಿಯ ವರದಿಯಲ್ಲಿ ತಿಳಿಸಿದೆ.

ಈ ಎರಡೂ ಉಪಕ್ರಮಗಳ ಮೂಲಕ ದೇಶೀಯ ಕೈಗಾರಿಕೆಗಳನ್ನು ಉತ್ತೇಜಿಸಲಾಗುತ್ತಿದ್ದು ಭಾರತದಲ್ಲಿ ಅಮೆರಿಕ ರಫ್ತುದಾರರು ಸುಂಕ ಮತ್ತು ಸುಂಕ ರಹಿತ ಅಡೆತಡೆಗಳನ್ನು ಎದುರಿಸಬೇಕಾಗಬಹುದು ಎಂದು ವರದಿ ವಿಶ್ಲೇಷಿಸಿದೆ. ವಿದೇಶಿ ವ್ಯಾಪಾರ ಅಡೆತಡೆಗಳಿಗೆ ಸಂಬಂಧಿಸಿದ ರಾಷ್ಟ್ರೀಯ ವ್ಯಾಪಾರ ಅಂದಾಜು ವರದಿ-2022ಯನ್ನು ಅಮೆರಿಕ ಸರ್ಕಾರ ಪ್ರಕಟಿಸಿದ್ದು, ಭಾರತದ ಮಾರುಕಟ್ಟೆ ಪ್ರವೇಶಿಸುವುದಕ್ಕೆ ಉಂಟಾಗಿರುವ ಅಡೆತಡೆಗಳನ್ನು ತೆಗೆದುಹಾಕುವುದಕ್ಕೆ ಇರುವ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಅವಕಾಶಗಳ ಬಗ್ಗೆ ಮಾತನಾಡಿದೆ.
ಭಾರತ ಸರ್ಕಾರ ಆರ್ಥಿಕ ಸುಧಾರಣೆಗೆ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ ಭಾರತದಂತಹ ಕ್ರಮಗಳನ್ನೂ ಘೋಷಿಸಿದೆ. ಇದರಿಂದ ವಿದೇಶಿ ಪೂರೈಕೆದಾರರು, ಆಮದಿನ ಮೇಲಿನ ಅವಲಂಬನೆ ಕಡಿಮೆಯಾಗಿ ದೇಶೀಯವಾಗಿ ಉತ್ತೇಜನ ದೊರೆಯಲಿದೆ ಎಂದು ವರದಿ ಹೇಳಿದೆ.

ಇನ್ನು ಅಮೆರಿಕ-ಭಾರತದ ನಡುವಿನ ಡಿಜಿಟಲ್ ವ್ಯಾಪಾರದ ಮೇಲೆ ಪರಿಣಾಮ ಬೀರುವಂತಹ ಡೇಟಾ ಲೋಕಲೈಸೇಷನ್ ಅವಶ್ಯಕತೆಗಳನ್ನು ಭಾರತ ಸರ್ಕಾರ ಪ್ರಸ್ತಾಪಿಸಿ ಘೋಷಿಸಿದೆ. ಇದು ಜಾರಿಯಾದಲ್ಲಿ ಭಾರತದ ಹೊರಗಿನಿಂದ ವೈಯಕ್ತಿಕ ಮಾಹಿತಿಗಳನ್ನು ಸಂಸ್ಕರಿಸಿ ಸಂಗ್ರಹಿಸುವ ಸೇವಾ ಪೂರೈಕೆದಾರರ ವೆಚ್ಚವನ್ನು ಏರಿಕೆ ಮಾಡಲಿದ್ದು, ಭಾರತದಲ್ಲಿ ಅನಗತ್ಯ, ಸ್ಥಳೀಯ ಡೇಟಾ ಕೇಂದ್ರಗಳ ನಿರ್ಮಾಣ ಅಥವಾ ಬಳಕೆಯನ್ನು ಅನಿವಾರ್ಯಗೊಳಿಸಲಿದೆ ಹಾಗೂ ಸಣ್ಣ ಸಂಸ್ಥೆಗಳಿಗೆ ಮಾರುಕಟ್ಟೆ ಪ್ರವೇಶಿಸದಂತೆ ಅಡ್ಡಿಯಾಗಿರಲಿದೆ ಎಂದು ಅಮೆರಿಕ ವಿಶ್ಲೇಷಿಸಿದೆ.


