

ಗಂಗೊಳ್ಳಿ : ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟ್ ಅಲೆಗಳ ಅಬ್ಬರಕ್ಕೆ ಮುಳುಗಡೆಗೊಂಡಿದ್ದು, ಐವರು ಮೀನುಗಾರರನ್ನು ರಕ್ಷಿಸಲಾಗಿದೆ.
ಉದ್ಯಾವರ ಸಂಪಿಗನಗರದ ಮುಹಮ್ಮದ್ ಹನೀಫ್ ಎಂಬವರ ‘ಮನಾಲ್’ ಹೆಸರಿನ ಬೋಟ್ ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಗಂಗೊಳ್ಳಿಯಿಂದ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಸಮುದ್ರದ ಅಲೆಗಳ ಒತ್ತಡಕ್ಕೆ ಇಂಜಿನ್ ಕೆಳಭಾಗದ ಪೈಬರ್ ಶೀಟ್ ಒಡೆಯಿತ್ತೆನ್ನಲಾಗಿದೆ.

ಇದರಿಂದ ನೀರು ಬೋಟಿನೊಳಗೆ ನುಗ್ಗಲು ಪ್ರಾರಂಭವಾಯಿತು. ಕೂಡಲೇ ಹತ್ತಿರದಲ್ಲಿದ್ದ ರಾಜರಕ್ಕಾ ಬೋಟಿನವರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಬಂದ ‘ರಾಜರಕ್ಕಾ’ ಬೋಟಿನವರು ಮುಳುಗಡೆಯಾಗುತ್ತಿದ್ದ ಬೋಟ್ ನಲ್ಲಿದ್ದ ತಾಂಡೇಲಾ ನಾಗಪ್ಪ ರಾಮ ಅಂಬಿಗ, ಕಲಾಸಿ ಸಚಿನ್, ಉಲ್ಲಾಸ ದೀಪಕ್ ಖಾರ್ವಿ, ಸುಭಾಷ್ ಗಾಂಗೇಶ್ವರ, ಸೂರಜ್ ಕುಮಾರ್ ಭಗತ್ ಅವರನ್ನು ರಕ್ಷಿಸಲಾಗಿದೆ. ಬೋಟು ಮುಳುಗಡೆಯಾಗಿರುವುದರಿಂದ ಸುಮಾರು 45ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಗಂಗೊಳ್ಳಿ, ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

