Sunday, July 6, 2025
spot_imgspot_img
spot_imgspot_img

ಹೆಣ್ಣು ಕೊಟ್ಟ ಅತ್ತೆಯನ್ನೇ ಸುತ್ತಿಗೆಯಲ್ಲಿ ಹೊಡೆದು ಕೊಂದ ಪಾಪಿ ಅಳಿಯ

- Advertisement -
- Advertisement -

ಬೆಂಗಳೂರು: ಗಂಡ ಹೆಂಡತಿ ನಡುವಿನ ಜಗಳ ಅತ್ತೆ ಬಲಿಯಾಗುವ ಮೂಲಕ ಕೊನೆಗೊಂಡ ಘಟನೆ ಮಾರತ್ ಹಳ್ಳಿ ಬಳಿಯ ಸಂಜಯನಗರದಲ್ಲಿ ನಡೆದಿದೆ. ಗಂಡನ ಕುಡಿತದ ಚಟಕ್ಕೆ ಬೇಸತ್ತ ಪತ್ನಿ ತವರು ಮನೆ ಸೇರಿದ್ದಳು, ಆದರೆ ತೀರ ಪಾನಮತ್ತನಾಗಿದ್ದ ಪತಿ ಮಹಾಶಯನಿಗೆ ಪತ್ನಿ ಬೇಕು ಎಂದು ಎನಿಸಿ ತವರು ಮನೆಗೆ ಬಂದು ಪತ್ನಿಯನ್ನು ತನ್ನೊಂದಿಗೆ ಕಳುಹಿಸಿಕೊಡುವಂತೆ ಜಗಳವಾಡಿದ್ದಾನೆ. ಅಷ್ಟೇ ಅಲ್ಲದೆ ಸುತ್ತಿಗೆಯಲ್ಲಿ ಅತ್ತೆ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪರಿಣಾಮ ಸಾವನ್ನಪ್ಪಿದ್ದಾಳೆ.

ಕಳೆದ ಆರು ವರ್ಷಗಳ ಹಿಂದೆ ನಾಗರಾಜ(35) ಎಂಬಾತ ಭವ್ಯಶ್ರೀ ಎಂಬಾಕೆಯನ್ನು ಮದುವೆಯಾಗಿದ್ದ. ಇವರ ದಾಂಪತ್ಯಕ್ಕೆ ಸಾಕ್ಷಿಯಾಗಿ 5 ವರ್ಷದ ಮಗು ಕೂಡ ಇದೆ. ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ನಾಗರಾಜನಿಗೆ ತೀವ್ರ ಕುಡಿತದ ಚಟ ಕೂಡ ಇತ್ತು. ಈ ಚಟ ಸುಖ ದಾಂಪತ್ಯ ಜೀವನಕ್ಕೆ ಮುಳ್ಳಾಗಿ ಪರಿಣಮಿಸಿದೆ. ನಿತ್ಯ ಕುಡಿದು ಬರುತ್ತಿದ್ದ ನಾಗರಾಜ ಪತ್ನಿಯೊಂದಿಗೆ ಜಗಳಕ್ಕೆ ನಿಲ್ಲುತ್ತಿದ್ದನು. ಈತನ ಕಾಟದಿಂದ ಬೇಸತ್ತ ಭವ್ಯಶ್ರೀ ಕಳೆದ ಮೂರು ವರ್ಷಗಳ ಹಿಂದೆಯೇ ಸಂಜಯನಗರದಲ್ಲಿರುವ ತನ್ನ ತಾಯಿ ಮನೆಗೆ ಬಂದು ನೆಲೆಸಿದ್ದಾಳೆ.

ಇತ್ತ ಮಗಳ ಜೀವನ ಹಾಳು ಮಾಡಿದ ಪಾಪಿ ಅಳಿಯ ತೊರೆಯಲು ಭವ್ಯಶ್ರೀ ಕುಟುಂಬಸ್ಥರು ವಿಚ್ಛೇದನಕ್ಕೆ ತಯಾರಿ ನಡೆಸುತ್ತಿತ್ತು. ಈ ನಡುವೆ ಕುಡಿದ ಅಮಲಿನಲ್ಲಿ ತೇಲಾಡುತ್ತಿದ್ದ ನಾಗರಾಜನಿಗೆ ಅದ್ಯಾಕೋ ಪತ್ನಿ ಬೇಕು ಎಂದು ಅನಿಸಿದೆ. ಹೀಗಾಗಿ ಜು.12ರಂದು ಸೊಪ್ಪು ವ್ಯಾಪಾರ ಮಾಡುತ್ತಿದ್ದ ಸ್ಥಳಕ್ಕೆ ಸುತ್ತಿಗೆ ಹಿಡಿದುಕೊಂಡು ಹೋಗಿ ಪತ್ನಿಯನ್ನು ತನ್ನೊಂದಿಗೆ ಕಳುಹಿಸಿಕೊಡುವಂತೆ ಅತ್ತೆ ಸೌಭಾಗ್ಯಳೊಂದಿಗೆ ಜಗಳವಾಡಿದ್ದಾನೆ. ಅಲ್ಲದೆ ಸುತ್ತಿಗೆಯಿಂದ ಐದಾರು ಬಾರಿ ಹಲ್ಲೆ ನಡೆಸಿದ್ದಾನೆ.

ಸುತ್ತಿಗೆ ಏಟಿನಿಂದ ತೀವ್ರ ಗಾಯಗೊಂಡ ಸೌಭಾಗ್ಯ ರಕ್ತಸ್ರಾವದಿಂದ ಕುಸಿದುಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಘಟನೆ ಸಂಬಂಧ ಎಚ್​.ಎ.ಎಲ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ನಾಗರಾಜನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಹೆಂಡತಿಯನ್ನೇ ಕೊಲ್ಲಲು ಪ್ಲಾನ್, ಬಲಿಯಾದದ್ದು ಅತ್ತೆ

ಆರೋಪಿ ನಾಗರಾಜನನ್ನು ಬಂಧಿಸಿದ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಆರೋಪಿಯು ತಾನು ಕುಡಿತದ ಮತ್ತಿನಲ್ಲಿ ತಿಳಿಯದೆ ಅತ್ತೆಯನ್ನೇ ಕೊಂದೆ ಎಂದು ಹೇಳಿಕೊಂಡಿದ್ದಾನೆ. ನಾನು ನನ್ನ ಅತ್ತೆಯನ್ನು ಕೊಲ್ಲುವ ಉದ್ದೇಶ ಇರಲಿಲ್ಲ. ನನ್ನ ಹೆಂಡತಿಯನ್ನು ಕೊಲ್ಲಲು ಪ್ಲಾನ್ ಮಾಡಿಕೊಂಡಿದ್ದೆ. ಆದರೆ ಕುಡಿದ ಮತ್ತಿನಲ್ಲಿ ಅತ್ತೆ ಯಾರು ಹೆಂಡತಿ ಯಾರು ಎಂದು ಗೊತ್ತಾಗಲಿಲ್ಲ, ಹೆಂಡತಿ ಅಂತ ಅತ್ತೆಗೆ ಹೊಡೆದುಬಿಟ್ಟೆ ಎಂದು ನಾಗರಾಜ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ.

- Advertisement -

Related news

error: Content is protected !!