


ಮಾನಸಿಕ ಖಿನ್ನತೆಗೆ ಒಳಗಾಗಿ ವ್ಯಕ್ತಿಯೊಬ್ಬ ನೇಣಿಗೆ ಶರಣಾಗಿರುವ ಘಟನೆ ಆನೇಕಲ್ ಪಟ್ಟಣದ ಭೋವಿ ಕಾಲೋನಿಯಲ್ಲಿ ನಡೆದಿದೆ. ಯೋಗೇಶ್ (29) ಆತ್ಮಹತ್ಯೆ ಮಾಡಿಕೊಂಡವನು. ಆ ಕುಟುಂಬಸ್ಥರು ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿತ್ತು. ಆದರೆ ಮನೆ ಮಗನ ದುಡುಕಿನ ನಿರ್ಧಾರಕ್ಕೆ ಕಣ್ಣು ಬಿಡದ ಮಗುವು ತಂದೆಯನ್ನು ಕಳೆದುಕೊಂಡರೆ, ಇತ್ತ ಪತ್ನಿ ಒಬ್ಬಂಟಿಯಾಗಿದ್ದಾಳೆ.
ಯೋಗೇಶ್ ಕಳೆದೊಂದು ವರ್ಷದ ಹಿಂದಷ್ಟೇ ಮದುವೆಯಾಗಿದ್ದ. ಪತ್ನಿ 8 ತಿಂಗಳ ಗರ್ಭಿಣಿಯಾಗಿದ್ದಳು, ಹೀಗಾಗಿ ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿದ್ದರು. ಆದರೆ ಕಳೆದ ಮೂರು ವರ್ಷದ ಹಿಂದೆ ಯೋಗೇಶ್ ಸಹೋದರ ಶಿವಕುಮಾರ್ ಮೃತಪಟ್ಟಿದ್ದ. ಹೀಗಾಗಿ ಇಡೀ ಕುಟುಂಬದ ಜವಾಬ್ದಾರಿ ಯೋಗೇಶ್ ಮೇಲಿತ್ತು.
ಯಾವುದೇ ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದ ಯೋಗೇಶ್‌ಗೆ ಮನೆ ಜವಾಬ್ದಾರಿ ಹೊರಲು ಕಷ್ಟವಾಗಿತ್ತು. ಇತ್ತೀಚೆಗೆ ಹಣಕಾಸಿನ ಸಮಸ್ಯೆಯಿಂದಾಗಿ ಮನನೊಂದಿದ್ದ ಎನ್ನಲಾಗಿದೆ. ಹೀಗಾಗಿ ಶುಕ್ರವಾರ ಬೆಳಗ್ಗೆ ಮನೆಯಲ್ಲಿ ಯಾರು ಇಲ್ಲದ ವೇಳೆ ರೂಮಿನ ಫ್ಯಾನ್‌ಗೆ ನೇಣು ಬೀಗಿದುಕೊಂಡು ಮೃತಪಟ್ಟಿದ್ದಾನೆ.
ರೂಮಿನ ಬಾಗಿಲು ಹಾಕಿಯೇ ಇದ್ದರಿಂದ ಅನುಮಾನಗೊಂಡ ಕುಟುಂಬಸ್ಥರು ಬಾಗಿಲು ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.