Wednesday, May 15, 2024
spot_imgspot_img
spot_imgspot_img

ಸಿಲಿಕಾನ್‌ ಸಿಟಿಯಲ್ಲಿ ದೊಡ್ಡ ಮಟ್ಟದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಪ್ಲ್ಯಾನ್‌; ಐವರು ಶಂಕಿತ ಉಗ್ರರ ಬಂಧನ

- Advertisement -G L Acharya panikkar
- Advertisement -

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ ಮಾಹಿತಿ ಮೇರೆಗೆ ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸುಹೈಲ್, ಉಮರ್, ತಬ್ರೇಜ್, ಮುದಾಸಿರ್, ಫೈಜಲ್‌ ರಬ್ಬಾನಿ ಬಂಧಿತ ಶಂಕಿತ ಉಗ್ರರು. ಸಿಸಿಬಿ ಹಾಗೂ ಕೇಂದ್ರ ಗುಪ್ತಚರ ಇಲಾಖೆ ಈ ಜಂಟಿ ಕಾರ್ಯಾಚರಣೆ ನಡೆಸಿದೆ ಎಂದು ತಿಳಿದುಬಂದಿದೆ. ಇನ್ನು ಮಾಸ್ಟರ್‌ಮೈಂಡ್‌ ಜುನೈದ್‌ ಎಸ್ಕೇಪ್‌ ಆಗಿದ್ದಾನೆ ಎಂದೂ ವರದಿಯಾಗಿದೆ.

ಐವರು ಶಂಕಿತ ಉಗ್ರರ ಬಳಿಯ ಮೊಬೈಲ್, ಅವರ ಬಳಿ ಸಿಕ್ಕಿರೋ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, ಸದ್ಯ ಮೊಬೈಲ್‌ಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಸಿಸಿಬಿ ಟೀಂ ಎಲ್ಲ ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸುತ್ತಿದ್ದು, ಇನ್ನೂ ಇಬ್ಬರು ಇವರ ಜೊತೆ ಸಂಪರ್ಕದಲ್ಲಿರೆಂದು ಮಾಹಿತಿ ತಿಳಿದುಬಂದಿದೆ.

ಈ ಹಿನ್ನೆಲೆ, ಆ ಇಬ್ಬರ ಬಗ್ಗೆಯೂ ಸಿಸಿಬಿ ಮಾಹಿತಿ ಕಲೆ ಹಾಕುತ್ತಿದ್ದು, ಮಡಿವಾಳ ಟೆಕ್ನಿಕಲ್ ಸೆಲ್‌ನಲ್ಲಿ ಶಂಕಿತ ಉಗ್ರರ ತೀವ್ರ ವಿಚಾರಣೆ ನಡೆಸಲಾಗಿದೆ. ಸಿಸಿಬಿ ವಶದಲ್ಲಿರೋ ಶಂಕಿತರು ಬೆಂಗಳೂರಿನ ಆರ್‌.ಟಿ. ನಗರದ ರೌಡಿಶೀಟರ್‌ಗಳಾಗಿದ್ದು, 2017ರಲ್ಲಿ ಆರ್ ಟಿ ನಗರದಲ್ಲಿ ನೂರ್ ಅಹ್ಮದ್‍ನ ಕಿಡ್ನಾಪ್ ಕಮ್ ಮರ್ಡರ್ ಕೇಸ್ ನ ಆರೋಪಿಗಳು. ಈ ಕೇಸಲ್ಲಿ 21 ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಕೊಲೆ ಮಾಡಿ ಜೈಲು ಸೇರಿದ ರೌಡಿಗಳಿಂದ ಇದೀಗ ಬ್ಲ್ಯಾಸ್ಟ್ ಗೆ ಸಂಚು ರೂಪಿಸಲಾಗುತ್ತಿತ್ತು.

ಕೊಲೆ ಮಾಡಿ ಪರಪ್ಪನ ಅಗ್ರಹಾರ ಸೇರಿದವರಿಗೆ ಜೈಲು ಸಿಬ್ಬಂದಿ ಟೆರರಿಸ್ಟ್ ಸೆಲ್ ನೀಡಿದ್ದರು. ಈ ವೇಳೆ ಶಂಕಿತರು ಜೈಲಿನಲ್ಲಿ ಟೆರರಿಸ್ಟ್ ಗಳ ವಿಶ್ವಾಸ ಗಳಿಸಿದ್ದರು. ಜೈಲಿನಲ್ಲೇ ಶಂಕಿತರಿಗೆ ಮೈಂಡ್ ವಾಶ್, ಟ್ರೈನಿಂಗ್ ನಡೆದಿತ್ತು. ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗುವಂತೆ ಮೈಂಡ್ ವಾಶ್ ಮಾಡಲಾಗಿತ್ತು. ಬಳಿಕ, ಶಂಕಿತ ಉಗ್ರರು ಹೊರ ಬಂದು ವಿದ್ವಂಸಕ ಕೃತ್ಯಕ್ಕೆ ಪ್ಲಾನ್ ಹಾಕಿದ್ದರು ಎಂದು ತಿಳಿದುಬಂದಿದೆ.

ಬಾಂಬ್‌ಗೆ ಬೇಕಾದ ರಾ ಮೆಟೀರಿಯಲ್ ಎಲ್ಲಾ ರೆಡಿ ಮಾಡಿದರು. ಇವರ ಜೊತೆ ಇನ್ನೂ ಹಲವರು ಸೇರಿ ಕೃತ್ಯಕ್ಕೆ ಪ್ಲ್ಯಾನ್‌ ನಡೆಸಿದ್ದರು ಎಂಬ ಮಾಹಿತಿಯೂ ಸಿಕ್ಕಿದೆ. ಇವರಿಗೆ ಲಿಂಕ್ ಇರೋ ಮತ್ತಷ್ಟು ಜನರಿಗಾಗಿ ಹುಡುಕಾಟ ನಡೆಯುತ್ತಿದ್ದು, ಸದ್ಯ ಸಿಸಿಬಿ ಶಂಕಿತ ಉಗ್ರರ ತೀವ್ರ ವಿಚಾರಣೆ ಮಾಡ್ತಿದೆ.

ಬೆಂಗಳೂರಲ್ಲಿ ದೊಡ್ಡ ಮಟ್ಟದ ಸ್ಫೋಟ ನಡೆಸಲು ಶಂಕಿತರ ಟೀಂ ಎಲ್ಲ ಪ್ಲ್ಯಾನ್‌ ಮಾಡಿತ್ತು. ಸುಮಾರು ಹತ್ತಕ್ಕೂ ಹೆಚ್ಚು ಜನರಿಂದ ಬೃಹತ್ ಸ್ಫೋಟಕ ಮಾಡೋ ಪ್ಲಾನ್ ನಡೀತಿದ್ದ ಮಾಹಿತಿ ಕೇಳಿಬಂದಿದೆ. ಬೆಂಗಳೂರು ಸಿಸಿಬಿ ಟೀಂಗೆ ಮಾಹಿತಿ ಸಿಕ್ಕ ಕೂಡಲೇ ಅಲರ್ಟ್ ಆಗಿದ್ದ ಟೀಂ ಶಂಕಿತರ ಲೊಕೇಶನ್ ಟ್ರೇಸ್ ಮಾಡಿದರು. ಈ ಹಿನ್ನೆಲೆ ಬೃಹತ್ ಸ್ಫೋಟ ಪ್ಲ್ಯಾನ್‌ಗೆ ತಡೆ ಬಿದ್ದಿದೆ. ಜಮತ್ ಇ ಇಸ್ಲಾಮಿ ಸಂಘಟನೆಯ ಹ್ಯಾಂಡ್ಲರ್ಸ್ ಮೂಲಕ ತರಬೇತಿ ಪಡೆಯಲು ಶಂಕಿತರು ಸುಲ್ತಾನ್ ಪಾಳ್ಯದಲ್ಲಿ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದರು. ಸುಲ್ತಾನ್ ಪಾಳ್ಯದ ಮಸೀದಿಯೊಂದರ ಪಕ್ಕದಲ್ಲಿಯೇ ವಾಸವಿದ್ದು ವಿಧ್ವಂಸಕ ಕೃತ್ಯಕ್ಕೆ ನಡೆಸಬೇಕಾದ ಬಗ್ಗೆ ಪ್ಲಾನಿಂಗ್ ನಡೆಯುತ್ತಿತ್ತು.

2017 ರಲ್ಲಿ ಆರ್ ಟಿ ನಗರದ ನೂರ್ ಕೊಲೆ ಕೇಸ್‌ನಲ್ಲಿ ಬಂಧಿತರ ಪೈಕಿ ಐವರಿಗೆ ಟೆರರ್ ಲಿಂಕ್ ಇದೆ ಎಂಬ ಮಾಹಿತಿ ಸಿಕ್ಕಿದೆ. ಸುಹೈಲ್, ಉಮರ್, ತಬ್ರೇಜ್, ಮುದಾಸಿರ್, ಫೈಜಲ್‌ರಬ್ಬಾನಿಗೆ ಟೆರರ್ ಲಿಂಕ್ ಇದ್ದು, 2008ರ ಬೆಂಗಳೂರು ಸೀರಿಯಲ್‌ ಬ್ಲಾಸ್ಟ್ ಕೇಸ್‌ ರೂವಾರಿ ಜುನೈದ್ ಪರಿಚಯವಾಗಿದೆ. ಜುನೈದ್ ಮೂಲಕ ಸ್ಫೋಟಕ್ಕೆ ಈ ಐವರು ಸಂಚು ಹೂಡಿದ್ದಾರೆ ಎಂದು ವರದಿಯಾಗಿದೆ.

ಸಿಸಿಬಿ ಹಾಗೂ ಕೇಂದ್ರ ಗುಪ್ತಚರ ಇಲಾಖೆ ಕಾರ್ಯಾಚರಣೆ ವೇಳೆ 7 ನಾಡ ಪಿಸ್ತೂಲ್, 42 ಜೀವಂತ ಗುಂಡುಗಳು, 2 ಸ್ಯಾಟಲೈಟ್ ಫೋನ್ ಮಾದರಿಯ ವಾಕಿಟಾಕಿ, ಮೊಬೈಲ್ ಫೋನ್, ವಿವಿಧ ಕಂಪನಿ ಸಿಮ್‌ಗಳು, ಲ್ಯಾಪ್ ಟಾಪ್ ಲಭ್ಯವಾಗಿದೆ ಎಂದು ತಿಳಿದುಬಂದಿದೆ. ಜುನೈದ್ ಸದ್ಯ ವಿದೇಶದಲ್ಲಿರೋ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಶಂಕಿತರ ವಿರುದ್ಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಐಪಿಸಿ 120, 121 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ರಾಷ್ಟ್ರದ್ರೋಹ ಆರೋಪದ ಮೇಲೆ ಎಫ್‍ಐಆರ್ ದಾಖಲಾಗಿದೆ.

- Advertisement -

Related news

error: Content is protected !!