ಬೆಂಗಳೂರು: ಕಾವೇರಿ ನೀರಿಗಾಗಿ ಬೆಂಗಳೂರಿನಲ್ಲಿ ಪ್ರತಿಭಟನೆ ಜೋರಾಗಿದ್ದು, ಮತ್ತೊಂದೆಡೆ ಯಾವುದೇ ಅಹಿತಕ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಆದರೆ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರಿಗೆ ನೀಡಲಾದ ಊಟದ ಪ್ಯಾಕೇಟ್ನಲ್ಲಿ ಇಲಿ ಪತ್ತೆಯಾಗಿದೆ. ಇದನ್ನು ಕಂಡು ಪೊಲೀಸ್ ಸಿಬ್ಬಂದಿ ಹೌಹಾರಿದ್ದಾರೆ.
ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ರೈತ ಸಂಘಟನೆಗಳು ಸೇರಿದಂತೆ ಕೆಲ ಸಂಘಸಂಸ್ಥೆಗಳು ಸೇರಿ ಇಂದು(ಸೆ.26) ಬೆಂಗಳೂರು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿವೆ. ಇದರಿಂದ ರಾಜ್ಯ ರಾಜಧಾನಿಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಇನ್ನು ಪ್ರತಿಭಟನೆಯ ಭದ್ರತೆಗೆ ನಿಯೋಜನೆ ಮಾಡಿದ ಪೊಲೀಸರಿಗೆ ಹೋಟೆಲ್‌ನಿಂದ ತಿಂಡಿ ಸರಬರಾಜು ಮಾಡಲಾಗಿದ್ದು, ಅದರಲ್ಲಿ ಸತ್ತ ಇಲಿ ಪತ್ತೆಯಾಗಿದೆ. ಇದನ್ನು ಕಂಡು ಪೊಲೀಸರು ಶಾಕ್ ಆಗಿದ್ದಾರೆ.
ಯಶವಂತಪುರ ಟ್ರಾಫಿಕ್ ಪೊಲೀಸರಿಗೆ ತಂದಿದ್ದ ಉಪಾಹಾರದಲ್ಲಿ (ರೈಸ್ ಬಾತ್) ಸತ್ತ ಇಲಿ ಪತ್ತೆಯಾಗಿದೆ. ಪೊಲೀಸ್ ಇಲಾಖೆಯಿಂದ ಸರಬರಾಜು ಮಾಡಿದ ಊಟದ ಪ್ಯಾಕೆಟ್ ತೆರೆದಾಗ ಅದರಲ್ಲಿ ಇಲಿ ಕಂಡುಬಂದಿದೆ.
ಪೊಲೀಸ್ ಕಮಿಷನರ್ ವಿರುದ್ಧ ಆಕ್ರೋಶ: ಇನ್ನು ಖಾಸಗಿ ಹೋಟೆಲ್ ನಿಂದ ಕಳಪೆ ಮಟ್ಟದ ಊಟ ಪೂರೈಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಪೊಲೀಸ್ ಆಯುಕ್ತರೇ ನೋಡಿ ನಿಮ್ಮ ಸಿಬ್ಬಂದಿ ತಿನ್ನುವ ಊಟವನ್ನು ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಹೆಸರೇಳಲಿಚ್ಛಿಸದ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ, ನೀವು ಇದೇ ಊಟ ಕೊಟ್ರೆ ತಿಂತೀರಾ ಎಂದು ಆಕ್ರೋಶವನ್ನೂ ಹೊರ ಹಾಕಿದ್ದಾರೆ. ಇಂತಹ ಊಟ ತಿಂದು ಹೆಚ್ಚುಕಡಿಮೆಯಾದ್ರೆ ನಮ್ಮ ಕುಟುಂಬಕ್ಕೆ ಹಾಗೂ ಆರೋಗ್ಯಕ್ಕೆ ಯಾರು ಹೊಣೆ ಎಂದು ಕಿಡಿಕಾರಿದ್ದಾರೆ.