Friday, May 3, 2024
spot_imgspot_img
spot_imgspot_img

ಬಡವರಿಗೆ ಮನೆ ಕಟ್ಟಿಸಿಕೊಡುವ ಮೂಲಕ ಮಾದರಿಯಾದ ಬೈರಂಪಳ್ಳಿಯ ಶ್ರಮಿಕ ತರುಣರ ತಂಡ

- Advertisement -G L Acharya panikkar
- Advertisement -

ಉಡುಪಿ : ಮನೆ ನಿರ್ಮಾಣ ಮಾಡೋದಕ್ಕೆ ಸಾಧ್ಯವಾಗದೇ ಇರುವ ಬಡವರಿಗೆ ಮನೆ ಕಟ್ಟಿಸಿಕೊಡುವ ಮೂಲಕ ಮಾದರಿ ಕಾರ್ಯಕ್ಕೆ ನಾಂದಿ ಹಾಡಿದೆ ಉಡುಪಿ ಜಿಲ್ಲೆಯ ಬೈರಂಪಳ್ಳಿಯ ಶ್ರಮಿಕ ತರುಣರ ತಂಡ.

ಇಂದಿನ ಕಾಲದಲ್ಲಿ ತನಗೆ ಮಾತ್ರವಲ್ಲ, ತನ್ನ ಮೂರು ನಾಲ್ಕು ತಲೆಮಾರುಗಳಿಗೆ ಆಗುವಷ್ಟು ಸಂಪತ್ತನ್ನು ಕೂಡಿಡುವ ಜನರೇ ಹೆಚ್ಚು. ಆದರೆ ಈ ಹುಡುಗರು ಮಾತ್ರ ಹಾಗಲ್ಲ. ಕಷ್ಟಪಟ್ಟು ದುಡಿದ ದುಡಿಯಮೆಯನ್ನು ನಿಸ್ವಾರ್ಥವಾಗಿ ಸಮಾಜ ಸೇವೆಗೆ ವಿನಿಯೋಗಿಸುತ್ತಿದ್ದಾರೆ. ಉಡುಪಿ ಜಿಲ್ಲೆಯ ಬೈರಂಪಳ್ಳಿಯ ಶ್ರಮಿಕ ತರುಣರ ತಂಡ ಸದಸ್ಯರ ಕಾರ್ಯಕ್ಕೆ ಇದೀಗ ಎಲ್ಲೆಡೆಯಿಂದಲೂ ಮೆಚ್ಚುಗೆಗೆ ವ್ಯಕ್ತವಾಗುತ್ತಿದೆ.

2020ರಲ್ಲಿ ತಮ್ಮ ಊರಿನ ಅಭಿವೃದ್ದಿಗಾಗಿಯೇ ಸಂತೋಷ್‌ ಕುಮಾರ್‌ ಬೈರಂಪಳ್ಳಿ ಅವರ ನೇತೃತ್ವದಲ್ಲಿ ಹುಟ್ಟಿಕೊಂಡ ಶ್ರಮಿಕ ತರುಣರ ತಂಡ, ಇದೀಗ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಇತರರಿಗೆ ಮಾದರಿಯಾಗಿದೆ. ಸಂತೋಷ್‌ ಕುಮಾರ್‌ ಬೈರಂಪಳ್ಳಿ ಅವರ ನೇತೃತ್ವದಲ್ಲಿ ಶ್ರಮಿಕ ತರುಣರ ತಂಡ ಈಗಾಗಲೇ ಸೂರು ಇಲ್ಲದವರಿಗೆ ಸೂರು ಕಲ್ಪಿಸುವ ಕಾರ್ಯವನ್ನು ಮಾಡುತ್ತಿದೆ.

ಕಳೆದ ಮೂರು ವರ್ಷಗಳ ಅವಧಿಯಲ್ಲಿ ಒಟ್ಟು ನಾಲ್ಕು ಮನೆಗಳನ್ನು ನಿರ್ಮಾಣ ಮಾಡಿದೆ. ಅಲ್ಲದೇ ಇನ್ನೂ 2 ಮನೆಗಳು ನಿರ್ಮಾಣ ಹಂತದಲ್ಲಿವೆ. ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಬೈರಂಪಳ್ಳಿ ಸಮೀಪದ ನಿವಾಸಿಯಾಗಿರುವ ಸುಶೀಲಾ ಎಂಬವರಿಗೆ ಮನೆಗೆ ಅಗತ್ಯವಿದೆ ಅನ್ನುವುದು ಸಂತೋಷ್‌ ಬೈರಂಪಳ್ಳಿ ಅವರ ಗಮನಕ್ಕೆ ಬಂದಿತ್ತು. ಕೂಡಲೇ ಕಾರ್ಯೋನ್ಮುಖರಾದ ಸಂತೋಷ್‌ ಕುಮಾರ್‌ ಬೈರಂಪಳ್ಳಿ ಅವರು ತನ್ನ ಶ್ರಮಿಕ ತರುಣರ ತಂಡದ ಸಭೆ ಕರೆದು, ಸುಶೀಲ ಅವರ ಮನೆ ನಿರ್ಮಾಣದ ಕಾರ್ಯಕ್ಕೆ ಮುಂದಾಗಿದ್ದರು. ಮನೆಯ ಪಕ್ಕದಲ್ಲೇ ಇರುವ ಜಾಗದಲ್ಲಿ ಆರು ತಿಂಗಳ ಹಿಂದೆ ಆರಂಭಗೊಂಡ ಮನೆ ನಿರ್ಮಾಣದ ಕಾರ್ಯ ಇದೀಗ ಪೂರ್ಣಗೊಂಡು ಗೃಹಪ್ರವೇಶವೂ ಮುಕ್ತಾಯಗೊಂಡಿದೆ.

ಸುಶೀಲ ಅವರದ್ದು ನೆಮ್ಮದಿ ಇಲ್ಲದ ಬದುಕು. ಮೂವರು ಗಂಡು, ಇಬ್ಬರು ಹೆಣ್ಣು ಮಕ್ಕಳಿದ್ದರೂ ಕೂಡ ಕಡು ಬಡತನ ಇವರನ್ನು ಕಾಡುತ್ತಿತ್ತು. ಕುಸಿಯುವ ಭೀತಿಯಲ್ಲಿದ್ದ ಪುಟ್ಟ ಗುಡಿಸಲಿನಲ್ಲಿಯೇ ಬದುಕು ಕಟ್ಟಿಕೊಂಡಿದ್ದರು. ಯಾರೇ ಇವರು ಬದುಕುತ್ತಿದ್ದ ಮನೆಯನ್ನು ನೋಡಿದ್ರೆ ಕಣ್ಣೀರು ಬರುತ್ತದೆ. ಆದರೆ ಇದೀಗ ಹೊಸ ಮನೆಯಲ್ಲಿ ಸುಶೀಲ ಅವರು ನೆಮ್ಮದಿ ಕಂಡು ಕೊಂಡಿದ್ದಾರೆ.

ಪುಟ್ಟ ಮನೆಯೊಂದನ್ನು ನಿರ್ಮಾಣ ಮಾಡಬೇಕು ಅನ್ನೋದು ಸುಶೀಲ ಅವರ ಕನಸು. ಆದರೆ ದುಡಿದ ಬದುಕು ಸಾಗಿಸೋದಕ್ಕೆ ಸಾಕು ಆಗ್ತಾ ಇರಲಿಲ್ಲ. ಇದೀಗ ಸುಶೀಲ ಅವರ ಕನಸನ್ನು ಸಂತೋಷ್‌ ಬೈರಂಪಳ್ಳಿ ಅವರ ಶ್ರಮಿಕ ತರುಣರ ತಂಡ ಸುಶೀಲ ಅವರ ಕನಸನ್ನು ನನಸಾಗಿದ್ದಾರೆ. ಸುಮಾರು 3.40 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಮನೆಯೊಂದನ್ನು ನಿರ್ಮಾಣ ಮಾಡಿದ್ದು, ಮನೆಗೆ ಸುಶೀಲ ಅಂತಾ ನಾಮಕರಣವನ್ನೂ ಮಾಡಿದ್ದಾರೆ.

ಶ್ರಮಿಕ ಯುವಕರು ಕೇವಲ ಕಾಟಾಚಾರಕ್ಕೊಂದು ಮನೆ ಕಟ್ಟಿಕೊಟ್ಟಿಲ್ಲ. ಮನೆಯಲ್ಲಿ ಒಂದು ಹಾಲ್‌, ಎರಡು ರೂಂ, ಅಡುಗೆ ಕೋಣೆ, ಶೌಚಾಲಯ ಸೇರಿ ಎಲ್ಲಾ ವ್ಯವಸ್ಥೆಯೂ ಸುಸಜ್ಜಿತವಾಗಿದೆ. ಯಾರೇ ಮನೆಯೊಳಗೆ ಪ್ರವೇಶಿಸಿದ್ರೂ ಕೂಡ ಖುಷಿ ಕೊಡುವ ವಾತಾವರಣ ಮನೆಯಲ್ಲಿ ನಿರ್ಮಾಣವಾಗಿದೆ. ಈಗಾಗಲೇ ನಾಲ್ಕು ಮನೆಗಳನ್ನು ನಿರ್ಮಾಣ ಮಾಡಿರುವ ಶ್ರಮಿಕ ತರುಣರ ತಂಡ ಎಸ್‌ಸಿ ಹಾಗೂ ಕೊರಗ ಸಮುದಾಯದ ಕುಟುಂಬಗಳ ಕಣ್ಣೊರೆಸುವ ಕಾರ್ಯದಲ್ಲಿ ಬ್ಯುಸಿಯಾಗಿದೆ.

ತಮ್ಮ ಸಂಪತ್ತನ್ನು ವೃದ್ದಿಸಿಕೊಳ್ಳಲು ಯೋಚಿಸುವ ಜನರ ಮಧ್ಯದಲ್ಲಿ ಸಂತೋಷ್‌ ಕುಮಾರ್‌ ಬೈರಂಪಳ್ಳಿ ಅವರಂತಹ ಸಮಾಜ ಸೇವಕರು ನಿಜಕ್ಕೂ ಮಾದರಿಯಾಗಿ ನಿಲ್ಲುತ್ತಾರೆ. ಸರಕಾರಗಳು ಮಾಡದ ಕೆಲಸವನ್ನು ನಿಸ್ವಾರ್ಥವಾಗಿ ಮಾಡುತ್ತಿರುವ ಇವರ ಸಮಾಜಮುಖಿ ಕಾರ್ಯಕ್ಕೆ ನಮ್ಮದೊಂದು ಸೆಲ್ಯೂಟ್.‌ ಮುಂದೆಯೂ ನೂರಾರು ಬಡ ಕುಟುಂಬಗಳಿಗೆ ಆಸರೆಯನ್ನು ನೀಡುವ ಕಾರ್ಯವನ್ನು ಮಾಡಲಿ. ಕೇವಲ ಮನೆ ನಿರ್ಮಾಣ ಮಾತ್ರವಲ್ಲ, ಊರಿನ ಸಮಗ್ರ ಅಭಿವೃದ್ದಿಗೆ ಈ ತಂಡ ಪಣತೊಟ್ಟಿದೆ. ಶ್ರಮಿಕ ತರುಣರ ತಂಡದ ಕಾರ್ಯಕ್ಕೆ ಯಾವುದೇ ಪ್ರಶಸ್ತಿ ನೀಡಿದ್ರೂ ಕೂಡ ಕಡಿಮೆ. ಶ್ರಮಿಕ ತರುಣರ ತಂಡದಂತೆಯೇ ಪ್ರತೀ ಊರಿನಲ್ಲಿಯೂ ಇಂತಹ ಸಮಾಜಮುಖಿ ಕಾರ್ಯಗಳು ಆರಂಭವಾದ್ರೆ ರಾಜ್ಯ ರಾಮ ರಾಜ್ಯ ಆಗುವುದರಲ್ಲಿ ಅನುಮಾನವೇ ಇಲ್ಲ.

- Advertisement -

Related news

error: Content is protected !!