


ಶಿವಮೊಗ್ಗ: ರಾತ್ರಿ ವೇಳೆ ಮಲಗಿದ್ದಾಗ ದಿಡೀರನೇ ಎದ್ದು ಕೂತು ನನಗೆ ಹಾವು ಕಚ್ಚಿದೆ ಎಂದು ಯುವತಿ ಹೇಳಿಕೊಂಡಿದ್ದಾಳೆ. ಆದರೆ, ಕರೆಂಟ್ ಹಾಕಿ ನೋಡಿದಾಗ ಹಾವು ಕಾಣದ ಹಿನ್ನೆಲೆಯಲ್ಲಿ ಮನೆಯವರು ಆಸ್ಪತ್ರೆಗೆ ಕರೆದೊಯ್ಯದೇ ಬೈದು ಮಲಗಿದ್ದರು. ಆದರೆ, ಬೆಳಗ್ಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಆಸ್ಪತ್ರೆಗೆ ಕರೆದೊಯ್ದಾಗ ವಿಷ ದೇಹದ ತುಂಬಾ ಹರಡಿಕೊಂಡು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಶಿಕಾರಿಪುರದ ಖಾಸಗಿ ಕಾಲೇಜಿನ ಮೊದಲ ಪಿಯುಸಿ ವಿದ್ಯಾರ್ಥಿನಿ ಅಕ್ಷತಾ ( 17) ಮೃತಪಟ್ಟ ಯುವತಿ. ಸೊರಬ ತಾಲೂಕಿನ ಆನವಟ್ಟಿ ಹೋಬಳಿಯ ತಲ್ಲೂರು ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.
ಅಕ್ಷತಾ ರಾತ್ರಿ ತಾಯಿಯ ಜೊತೆ ಮಲಗಿದ್ದ ವೇಳೆ ಕಿರುಚಾಡಿ ಹಾವು ಕಚ್ಚಿತು ಎಂದಿದ್ದಳು. ಮಧ್ಯರಾತ್ರಿ ವಿದ್ಯುತ್ ದೀಪ ಹಾಕಿದ್ದಾಗ ಬೆಳಕಿನಲ್ಲಿ ಹಾವು ಕಾಣಿಸಿರಲಿಲ್ಲ. ಯಾವುದೋ ಹುಳ ಕಚ್ಚಿರಬೇಕು ಎಂದು ಮನೆಯವರು ನಿರ್ಲಕ್ಷ್ಯ ವಹಿಸಿದರು. ನಂತರ ಆಕೆಯ ದೇಹದಲ್ಲಿ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೊದಲು ಆನವಟ್ಟಿ ಖಾಸಗಿ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆಯಲಾಗಿದೆ. ಆದರೆ, ಅಲ್ಲಿಯೂ ಆರೋಗ್ಯ ಚೇತರಿಕೆ ಕಾಣದ ಹಿನ್ನೆಲಯಲ್ಲಿ ಶಿಕಾರಿಪುರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಯುವತಿಗೆ ಹಾವು ಕಚ್ಚಿದೆ ಎಂಬ ವಿಷಯ ತಿಳಿದ ನಂತರ ಆಕೆಯನ್ನು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಷ್ಟರಲ್ಲಾಗಲೇ ಹಾವಿನ ವಿಷ ದೇಹಪೂರ್ತಿ ಹರಡಿಕೊಂಡಿತ್ತು. ವೈದ್ಯರು ನಿರಂತರವಾಗಿ ಚಿಕಿತ್ಸೆಯನ್ನೂ ನೀಡುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಯುವತಿ ಮೃತಪಟ್ಟಿದ್ದಾಳೆ.