





ಎಕ್ಕೂರು : ಅಪರಿಮಿತ ವೇಗದ ಬೈಕ್ ಚಾಲನೆಯಿಂದಾಗಿ ಟ್ರಕ್ ಒಂದರ ಹಿಂಭಾಗಕ್ಕೆ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಬೈಕ್ ಸವಾರ ಯುವಕನೊಬ್ಬ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಭಾನುವಾರ ಬೆಳಗ್ಗೆ ಎಕ್ಕೂರು ರೈಲ್ವೇ ಸೇತುವೆ ಮೇಲ್ಬಾಗದಲ್ಲಿ ನಡೆದಿದೆ.
ಮೂಲತಃ ಕೇರಳ ಪಾತೂರು ನಿವಾಸಿ ಹಾಲಿ ಮಂಗಳೂರಿನ ಉರ್ವ, ಚಿಲಿಂಬಿಯ ಮಾನಸ ರೆಸಿಡೆನ್ಸಿಯಲ್ಲಿ ವಾಸವಿರುವ ಸುಧೀಶ್ ಸಿ.ಕೆ (26) ,ಚಂದ್ರಹಾಸ್ ಬೆಲ್ಚಾಡ ಅವರ ಪುತ್ರ ಮೃತಪಟ್ಟ ಯುವಕ. ಮಂಗಳೂರಿನಲ್ಲಿ ಎಸಿ ಮೆಕ್ಯಾನಿಕ್ ಆಗಿದ್ದ ಸುಧೀಶ್ ಭಾನುವಾರ ಮುಂಜಾನೆ ಕೇರಳದ ಪಾತೂರಿನಿಂದ ತನ್ನ ಬೈಕಲ್ಲಿ ಮಂಗಳೂರಿಗೆ ಅಪರಿಮಿತ ವೇಗದಿಂದ ಧಾವಿಸುತ್ತಿದ್ದ ವೇಳೆ ಎಕ್ಕೂರಿನ ರೈಲ್ವೇ ಮೇಲ್ಸೇತುವೆಯಲ್ಲಿ ಮುಂದಿನಿಂದ ಸಾಗುತ್ತಿದ್ದ ಭಾರೀ ಗಾತ್ರದ ಈಚರ್ ಟಿಪ್ಪರ್ ಟ್ರಕ್ ಗೆ ಡಿಕ್ಕಿ ಹೊಡೆದು ತಲೆಗೆ ಗಂಭೀರ ಗಾಯಗೊಂಡಿದ್ದು ಸ್ಥಳೀಯರು ಆಸ್ಪತ್ರೆ ಸೇರಿಸಿದ್ದರು.
ಅಪಘಾತದ ತೀವ್ರತೆಗೆ ರಸ್ತೆಯಲ್ಲಿ ಸುಧೀಶ್ ತಲೆಭಾಗದ ರಕ್ತದ ಓಕುಳಿಯೇ ಹರಿದಿತ್ತು. ತೀವ್ರ ರಕ್ತಸ್ರಾವದಿಂದಾಗಿ ಯುವಕ ಸಾವನ್ನಪ್ಪಿದ್ದಾನೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.








