



ಕಡಬ : ಸರಕಾರಿ ಪದವಿಪೂರ್ವ ಕಾಲೇಜ್ ಕಡಬದ ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ನಡೆಸಿ ಕೊಲೆ ಮಾಡಲು ಪ್ರಯತ್ನಿಸಿದ ಆರೋಪದಡಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿರುವ ಕೇರಳ ಮಲ್ಲಾಪುರದ ಅಬಿನ್.ಪಿ.ಸಿ.ಬಿ. ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸರಿತಾ.ಡಿ. ಅವರು ವಜಾಗೊಳಿಸಿದ್ದಾರೆ.
ಕೇರಳ ಮಲಪ್ಪುರಂ ನಿವಾಸಿ ಅಬಿನ್ ಎಂಬಾತ ವಿದ್ಯಾರ್ಥಿನಿಯು ತನ್ನನ್ನು ನಿರ್ಲಕ್ಷಿಸುತ್ತಿದ್ದಾಳೆ ಎಂಬ ಕಾರಣಕ್ಕೆ ಕೃತ್ಯ ಎಸಗಿದ್ದ. ಕಡಬ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಮವಸ್ತ್ರವನ್ನು ಹೊಲಿಸಿ, ಪಡೆದುಕೊಂಡು ಬಂದಿದ್ದ. ಕೊಯಮುತ್ತೂರಿನಿಂದ ಆ್ಯಸಿಡ್ ಖರೀದಿಸಿ, ಸಮವಸ್ತ್ರ ಧರಿಸಿಕೊಂಡಿದ್ದ ಆರೋಪಿ, ಮಾರ್ಚ್ 4ರಂದು ಬೆಳಗ್ಗೆ ಕಾಲೇಜಿಗೆ ಬಂದು ದ್ವಿತೀಯ ಪಿಯುಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ. ಈ ವೇಳೆ ಇತರ ಇಬ್ಬರು ವಿದ್ಯಾರ್ಥಿನಿಯರಿಗೂ ಗಾಯಗಳಾಗಿದ್ದವು.
ಈ ಬಗ್ಗೆ ಯುವಕನ ಜಾಮೀನು ಅರ್ಜಿ ವಿಚಾರಣೆಯು ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದಲ್ಲಿ ನಡೆಯಿತು. ಈ ವೇಳೆ ಪ್ರಾಸಿಕ್ಯೂಷನ್ ಪರ ವಕೀಲರು ವಿದ್ಯಾರ್ಥಿನಿಯರ ವೈದ್ಯಕೀಯ ಧೃಢಪತ್ರ ಸಲ್ಲಿಸಿದ್ದು. ಅದರಲ್ಲಿ ಈಗಲೂ ವಿದ್ಯಾರ್ಥಿನಿಯರು ಚಿಕಿತ್ಸೆ ಪಡೆದುಕೊಳ್ಳುತ್ತಿರುವುದು ಕಂಡು ಬಂದಿತ್ತು.
ಹೀಗಾಗಿ ಆರೋಪಿಗೆ ಜಾಮೀನು ನೀಡಿದ್ದಲ್ಲಿ ಅವರಿಗೆ ತೊಂದರೆಯಾಗುವ ಸಾಧ್ಯತೆಯಿದೆ ಹಾಗೂ ಪ್ರಕರಣದ ತೀವ್ರತೆಯನ್ನು ಗಮನಿಸಿ ಆರೋಪಿಯ ಜಾಮೀನು ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿದೆ. ಅಭಿಯೋಜನೆಯ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಜಯಂತಿ. ಕೆ. ಭಟ್ ವಾದಿಸಿದ್ದರು.