
ವಿಟ್ಲ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ವಿಟ್ಲ ಇದರ ಜಂಟಿ ಆಶ್ರಯದಲ್ಲಿ ಪೋಷಣ್ ಅಭಿಯಾನ ಮಾಸಾಚರಣೆ ಹಾಗೂ ಅಂಗನವಾಡಿ ನೌಕರರ ಸಂಘ ವಿಟ್ಲ ಇದರ ವತಿಯಿಂದ ಸನ್ಮಾನ ಕಾರ್ಯಕ್ರಮ ವಿಟ್ಲದ ಕಾಶಿಮಠ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.
ಯೋಜನಾ ಮಟ್ಟದ ಅಂಗನವಾಡಿ ನೌಕರರ ವತಿಯಿಂದ ವಿಟ್ಲ ಯೋಜನೆಯಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾಗಿ 37 ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿದ ಸುಧಾ ಜೋಷಿ ಸಹಿತ ಅಂಗನವಾಡಿ ಕಾರ್ಯಕರ್ತೆಯರಾದ ಲಲಿತ, ಜಯಲಕ್ಷ್ಮಿ, ಸಹಾಯಕಿಯರಾಗಿದ್ದ ಜಯಂತಿ, ಶಂಕರಿ, ಮೇರಿ ಡಿಸೋಜ ಇವರುಗಳನ್ನು ಶಾಲು ಹೊದಿಸಿ ಸನ್ಮಾನಿಸಿ ಗೌರವಾರ್ಪಣೆ ಸಲ್ಲಿಸಲಾಯಿತು.


ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಷಾ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಸುಧಾ ಜೋಷಿ ಯವರು ದೀಪ ಬೆಳಗಿಸಿ ತಮ್ಮ ಮಾತಿನಲ್ಲಿ ಕಾರ್ಯಕರ್ತೆಯರ ನೌಕರರ ಸಂಘದ ಅಚ್ಚು ಕಟ್ಟುತನ ಕಾರ್ಯಕ್ರಮ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಸೇವಾ ಅವಧಿಯಲ್ಲಿ ಧನಾತ್ಮಕ ಚಿಂತನೆಯೊಂದಿಗೆ ಕಾರ್ಯ ಪ್ರವೃತ್ತರಾಗಿ ನಮ್ಮ ಕರ್ತವ್ಯ ನಿಷ್ಠೆ ನಮ್ಮನ್ನು ಕಾಪಾಡುತ್ತವೆ, ವೃತ್ತಿ ದೊಡ್ಡದಾಗಿರಲಿ ಸಣ್ಣದಿರಲಿ ವೃತ್ತಿಯನ್ನು ಪ್ರೀತಿಸಿ ನಡೆದರೆ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನುವ ತಮ್ಮ ಸ್ವ ಅನುಭವವನ್ನು ಹಂಚಿಕೊಂಡರು.


ಅಧ್ಯಕ್ಷತೆ ವಹಿಸಿದ್ದ ಉಷಾ ರವರು ಕಾರ್ಯಕ್ರಮಕ್ಕೆ ಮೆಚ್ಚುಗೆ ಸೂಚಿಸಿ ಶುಭ ಹಾರೈಸಿದರು. ಜಿಲ್ಲಾ ನೌಕರರ ಸಂಘದ ಅಧ್ಯಕ್ಷೆ ರವಿಕಲಾ ರವರು, ಸಂಘಟನೆಯ ಬಲವರ್ಧನೆ ವಿಟ್ಲದಲ್ಲಿ ಉತ್ತಮ ರೀತಿಯಲ್ಲಿರುವುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ ಎನ್ನುವ ಮೆಚ್ಚುಗೆ ಸೂಚಿಸಿ ಶುಭ ಹಾರೈಸಿದರು. ವಿಟ್ಲ ಯೋಜನಾ ನೌಕರರ ಸಂಘದ ಉಪಾಧ್ಯಕ್ಷೆ ತುಳಸಿ ಉಪಸ್ಥಿತರಿದ್ದರು.


ವಿಟ್ಲ ಯೋಜನೆಯ ಮೇಲ್ವಿಚಾರಕಿಯರಾದ ರೋಹಿಣಿ, ಲೋಲಾಕ್ಷಿ, ಸೋಮಕ್ಕ, ಲೀಲಾವತಿ, ಶಾರದಾ ವಿನೀತಾ ಇವರುಗಳು ಉಪಸ್ಥಿತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಮೂಕಾಂಬಿಕ ಪ್ರಾರ್ಥಿಸಿದರು. ಕಾರ್ಯಕರ್ತೆ ರೇವತಿ ಸ್ವಾಗತಿಸಿ, ಕಾರ್ಯಕರ್ತೆ ವಿಮಲ ಪ್ರಸ್ತಾವಿಕ ಮಾತನ್ನಾಡಿದರು. ತುಳಸಿ, ಸುಲೋಚನಾ, ಅಶ್ವಿನಿ, ಸತ್ಯವತಿಯವರು ಸನ್ಮಾನ ಪತ್ರಗಳನ್ನು ವಾಚಿಸಿದರು. ಅಶ್ವಿನಿ, ಹೇಮ ಮಾಲಿನಿ ಇವರು ಪೋಷಣ್ ಮಸಾಚರಣೆ ರಂಗೋಲಿ ಚಿತ್ತಾರವನ್ನು ಬಿಡಿಸಿದರು. ಯೋಜನಾ ಮಟ್ಟದ ಎಲ್ಲಾ ಕಾರ್ಯಕರ್ತೆಯರು ಸಹಾಯಕಿಯರು ಭಾಗವಹಿಸಿದ್ದರು. ಜತೆ ಕಾರ್ಯದರ್ಶಿ ವಸಂತಿ, ಗೌರವಧ್ಯಕ್ಷರಾದ ಲಕ್ಷ್ಮಿ ಕುಂಡಡ್ಕ ಕಾರ್ಯಕ್ರಮದ ಜವಾಬ್ದಾರಿ ನಿರ್ವಹಿಸಿದರು. ಲಕ್ಷ್ಮಿ ಭಟ್ ಕಾರ್ಯಕ್ರಮ ನಿರೂಪಿಸಿ, ಮೇಲ್ವಿಚಾರಕಿ ಲೀಲಾವತಿ ವಂದಿಸಿದರು.

